ನವದೆಹಲಿ,ಫೆ.20(DaijiworldNews/TA): ದೆಹಲಿ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ತೆರೆಬಿದ್ದಿದ್ದು ಇದೀಗ ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರೊಂದಿಗೆ ಪ್ರವೇಶ್ ವರ್ಮಾ, ಮಂಜಿಂದರ್ ಸಿಂಗ್ ಸಿರ್ಸಾ, ರವೀಂದ್ರ ಇಂದ್ರರಾಜ್, ಕಪಿಲ್ ಮಿಶ್ರಾ, ಆಶಿಶ್ ಸೂದ್ ಮತ್ತು ಪಂಕಜ್ ಸಿಂಗ್ ಈ ಆರು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧೆಯಲ್ಲಿ ಪ್ರವೇಶ್ ವರ್ಮಾ, ಸಿರ್ಸಾ, ರವೀಂದ್ರ ಇಂದ್ರರಾಜ್ ಮತ್ತು ಆಶಿಶ್ ಸೂದ್ ಎಂಬ ಮೂವರು ನಾಯಕರ ಹೆಸರುಗಳು ಮಾತ್ರ ಕೇಳಿಬರುತ್ತಿದ್ದವು. ಆದರೆ ಅಂತಿಮವಾಗಿ ಶಾಲಿಮಾರ್ ಬಾಗ್ನ ಶಾಸಕಿ ರೇಖಾ ಗುಪ್ತಾ ಅವರ ಹೆಸರನ್ನು ಅಂತಿಮಗೊಳಿಸಲಾಯಿತು ಎಂದು ಹೇಳಲಾಗಿದೆ.
ರಾಮಲೀಲಾ ಮೈದಾನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ, ಏಕನಾಥ್ ಶಿಂದೆ, ಚಂದ್ರಬಾಬು ನಾಯ್ಡು, ರಾಜನಾಥ್ ಸಿಂಗ್ ಸೇರಿ ಹಲವು ಗಣ್ಯರು ಪಾಲ್ಗೊಂಡಿದ್ದರು.