ನವದೆಹಲಿ, ಫೆ.20 (DaijiworldNews/AK): 27 ವರ್ಷಗಳ ಬಳಿಕ ದೆಹಲಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ ಸರ್ಕಾರವನ್ನು ರೇಖಾ ಗುಪ್ತಾ ಮುನ್ನಡೆಸಲಿದ್ದಾರೆ.

ನೂತನ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ ರೇಖಾ ಗುಪ್ತಾ ಅವರ ಜೊತೆ ಡಿಸಿಎಂ ಆಗಿ ಪರ್ವೇಶ್ ವರ್ಮ, ಸಚಿವರಾಗಿ ಮಂಜಿಂದರ್ ಸಿಂಗ್ ಸಿರ್ಸಾ, ರವೀಂದ್ರ ಕುಮಾರ್ ಇಂದ್ರಜ್, ಆಶಿಶ್ ಸೂದ್ ಮತ್ತು ಪಂಕಜ್ ಕುಮಾರ್ ಸಿಂಗ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದೀಗ ನೂತನ ಸಚಿವರಿಗೆ ಖಾತೆಗಳನ್ನು ಹಂಚಲಾಗಿದೆ.ಇಂದು ಸಂಜೆ ಮೊದಲ ಸಂಪುಟ ಸಭೆ ಕೂಡ ನಡೆದಿದೆ.
ಪರ್ವೇಶ್ ವರ್ಮಾ (ಉಪ ಮುಖ್ಯಮಂತ್ರಿ) ಅವರಿಗೆ ಶಿಕ್ಷಣ, ಪಿಡಬ್ಲ್ಯೂಡಿ ಮತ್ತು ಸಾರಿಗೆ ಖಾತೆಗಳನ್ನು ನೀಡಲಾಗಿದೆ. ಮಂಜಿಂದರ್ ಸಿಂಗ್ ಸಿರ್ಸಾ ಅವರಿಗೆ ಆರೋಗ್ಯ, ನಗರಾಭಿವೃದ್ಧಿ ಮತ್ತು ಕೈಗಾರಿಕೆಗಳ ಖಾತೆಗಳನ್ನು ನೀಡಲಾಗಿದೆ. ರವೀಂದ್ರ ಕುಮಾರ್ ಇಂದ್ರಜ್ ಸಮಾಜ ಕಲ್ಯಾಣ, ಎಸ್ಸಿ/ಎಸ್ಟಿ ವ್ಯವಹಾರಗಳು ಮತ್ತು ಕಾರ್ಮಿಕ ಖಾತೆಗಳನ್ನು ನಿರ್ವಹಿಸಲಿದ್ದಾರೆ. ಕಪಿಲ್ ಮಿಶ್ರಾ ನೀರು, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಖಾತೆಗಳನ್ನು ನಿರ್ವಹಿಸಲಿದ್ದಾರೆ.
ಆಶಿಶ್ ಸೂದ್ ಹೊಸ ಸಂಪುಟದಲ್ಲಿ ಕಂದಾಯ, ಪರಿಸರ, ಆಹಾರ ಮತ್ತು ನಾಗರಿಕ ಸರಬರಾಜು ಖಾತೆಗಳನ್ನು ನಿರ್ವಹಿಸಲಿದ್ದಾರೆ. ಪಂಕಜ್ ಕುಮಾರ್ ಸಿಂಗ್ ಅವರಿಗೆ ಕಾನೂನು, ಶಾಸಕಾಂಗ ವ್ಯವಹಾರಗಳು ಮತ್ತು ವಸತಿ ಖಾತೆಗಳನ್ನು ನೀಡಲಾಗಿದೆ.