ಗದಗ, ಫೆ.21 (DaijiworldNews/AA): ಗ್ಯಾರಂಟಿಗಳು ರಾಜಕೀಯ ಲಾಭಕ್ಕಾಗಿ ಮಾಡಿದ ಯೋಜನೆ. ಜನರು, ತಾಯಂದಿರ ಕಣ್ಣಲ್ಲಿ ಮಣ್ಣು ಹಾಕುವ ಯೋಜನೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.

ಗದಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೃಹಲಕ್ಷ್ಮಿ ಹಣ ಸಂಬಳವೇ ಅಂತ ಕೇಳುತ್ತಾರೆ. ಅದು ಗೌರವಧನ. ಪ್ರತಿ ತಿಂಗಳು ಕೊಟ್ಟಿಲ್ಲ ಅಂದರೆ ಗೌರವ ಕೊಟ್ಟಿಲ್ಲ ಎಂದರ್ಥ. ಹೆಣ್ಣುಮಕ್ಕಳಿಗೆ ಗೌರವ ಕೊಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಗೃಹಲಕ್ಷ್ಮಿ ಹಣ ಯಾವ ತಿಂಗಳೂ ಸರಿಯಾಗಿ ಬಂದಿಲ್ಲ. ರಾಜ್ಯ ಸರ್ಕಾರದ ಹಣಕಾಸಿನ ವ್ಯವಸ್ಥೆ ಸಂಪೂರ್ಣ ನೆಲಕಚ್ಚಿದೆ. ಆದರೆ, ಸಿಎಂ ಭಂಡತನದಿಂದ ಒಪ್ಪಿಕೊಳ್ಳುತ್ತಿಲ್ಲ ಎಂದರು.
ಕೇವಲ ಗ್ಯಾರಂಟಿ ಅಷ್ಟೇ ಅಲ್ಲ, ಯಾವುದೇ ಅಭಿವೃದ್ಧಿ ಯೋಜನೆಗಳಿಗೂ ಹಣವಿಲ್ಲ. ಸಾಲದ ರೂಪದ ಯೋಜನೆಗಳನ್ನು ಬಿಟ್ಟರೆ ಯಾವುದೂ ಇಲ್ಲ. ಕುಡಿಯುವ ನೀರಿನ ಯೋಜನೆಗೂ ಹಣ ಕೊಡದೇ ಜನರನ್ನು ಸಂಕಷ್ಟಕ್ಕೆ ದೂಡಿದೆ. ಜನಸಾಮಾನ್ಯರು ಬಳಸುವ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿವೆ. ತೆರಿಗೆ ಪಡೆದು ಅದನ್ನೇ ಗ್ಯಾರಂಟಿ ರೂಪದಲ್ಲಿ ಮರಳಿ ಕೊಡಲು ಮುಂದಾಗಿದೆ. ಆದರೆ, ಅದರಲ್ಲೂ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕಿಡಿಕಾರಿದರು.