ದಾವಣಗೆರೆ, ಫೆ.21 (DaijiworldNews/AA): ನಿತಿನ್ ಗಡ್ಕರಿಯವರು ಈ ದೇಶದ ಪ್ರಧಾನಿಯಾದರೆ ಒಳ್ಳೆಯದಾಗುತ್ತದೆ. ಬಿಜೆಪಿ ಈ ದೇಶದಲ್ಲಿ ಅಧಿಕಾರ, ಆಡಳಿತದಲ್ಲಿ ಇರಬಾರದು ಎಂಬುದು ನನ್ನ ಅಭಿಪ್ರಾಯ. ಆದರೆ ಜನಮನ್ನಣೆ ಅವರಿಗೆ ಸಿಕ್ಕಿದೆ. ಮುಂದಿನ 4 ವರ್ಷಗಳ ಅವಧಿಯಲ್ಲಿ ಬೇರೆಯವರಿಗೆ ಪ್ರಧಾನಿ ಹುದ್ದೆ ಕೊಟ್ಟರೆ ದೇಶ ಒಂದು ದಿಕ್ಕಿನಲ್ಲಿ ಹೋಗಬಹುದು ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.

ದಾವಣಗೆಯಲ್ಲಿ ಇಂದು ಸುದ್ದಿಗಾರರೊಂದಿಗೆ ಕೇಂದ್ರ ನಾಯಕರನ್ನು ಟೀಕಿಸಿದರೆ ರಾಜ್ಯದಲ್ಲಿ ಸಚಿವರಿಗೆ ಅವರ ಸ್ಥಾನ ಉಳಿಯುತ್ತದೆ ಎಂಬ ಪ್ರಲ್ಹಾದ್ ಜೋಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ಹಣೆಬರಹ ಅದು, ಯಾರೂ ಏನೂ ಮಾಡುವುದಕ್ಕೆ ಆಗಲ್ಲ. ದೇಶದ ಜನತೆಗೆ ಕೇಂದ್ರದ ಐವರು ಮಂತ್ರಿಗಳ ಹೆಸರು ಗೊತ್ತಿಲ್ಲದಂತೆ ಮಾಡಿದ್ದಾರೆ ಪ್ರಧಾನಿಗಳು. ಎಲ್ಲದಕ್ಕೂ ಪ್ರಧಾನಿಗಳನ್ನೇ ತೋರಿಸಿದರೆ ಜಿಲ್ಲಾ, ತಾಲ್ಲೂಕು ಗ್ರಾಮ ಪಂಚಾಯತಿ ಏಕೆ ಬೇಕು ಎಂದು ಲಾಡ್? ಎಂದು ಪ್ರಶ್ನೆ ಮಾಡಿದರು.
ಬಿಜೆಪಿ ಅವಧಿಯಲ್ಲಿ ಪ್ರಾರಂಭಿಸಿದ ವಿಶ್ವವಿದ್ಯಾಲಯಗಳನ್ನು ಕಾಂಗ್ರೆಸ್ ಸರ್ಕಾರ ಮುಚ್ಚುತ್ತಿದೆ ಎನ್ನುವ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿ ಅವಧಿಯಲ್ಲಿ ವಿವಿಗಳನ್ನು ಪ್ರಾರಂಭ ಮಾಡಿದರು. ಆದರೆ ಎಷ್ಟು ಹಣವನ್ನು ವಿವಿಗೆ ಮೀಸಲಿಟ್ಟಿದ್ದಾರೆ ಎನ್ನುವುದು ಗೊತ್ತಾ? ಒಂದು ವಿವಿಗೆ ಎರಡು ಕೋಟಿ ಅನುದಾನ ಬಿಡುಗಡೆ ಮಾಡಿದರೆ ಅದು ಸಾಧ್ಯವೇ? ವಿವಿಗಳನ್ನು ಪ್ರಾರಂಭಿಸುವುದಕ್ಕೆ ರಾಜಕೀಯವಾಗಿ ಯೋಚನೆ ಮಾಡುವುದಕ್ಕಿಂತ, ಸೌಲಭ್ಯ ಒದಗಿಸಬೇಕಲ್ವಾ ಎಂದರು.