ನವದೆಹಲಿ, ಫೆ.24 (DaijiworldNews/AK): ಬೊಜ್ಜು ವಿರುದ್ಧದ ಹೋರಾಟವನ್ನು ಬಲಪಡಿಸಲು, ಆಹಾರದಲ್ಲಿ ಖಾದ್ಯಗಳಲ್ಲಿ ಅಡುಗೆ ಎಣ್ಣೆಯ ಬಳಕೆಯನ್ನು ಕಡಿಮೆ ಮಾಡುವ ಬಗ್ಗೆ ಜಾಗೃತಿ ಮೂಡಿಸಲು ಪ್ರಧಾನಿ ನರೇಂದ್ರ ಮೋದಿ ದೇಶದ ಪ್ರಮುಖ ಹತ್ತು ವ್ಯಕ್ತಿಗಳ ಹೆಸರಗಳನ್ನು ನಾಮ ನಿರ್ದೇಶನ ಮಾಡಿದ್ದಾರೆ.

ಇತ್ತೀಚಿಗೆ ನಡೆದ ಮನ್ ಕೀ ಬಾತ್ನಲ್ಲಿ ಪ್ರಧಾನಿ ಮೋದಿ ಹತ್ತು ಹೆಸರುಗಳನ್ನು ನಾಮ ನಿರ್ದೇಶನ ಮಾಡುವುದಾಗಿ ಹೇಳಿದ್ದರು. ಅದೇ ರೀತಿ ಹತ್ತು ಹೆಸರುಗಳನ್ನು ಎಕ್ಸ್ ಖಾತೆಯಲ್ಲಿ ಅವರು ಹಂಚಿಕೊಂಡಿದ್ದಾರೆ.
ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ, ಅಜಂಗಢದ ಮಾಜಿ ಬಿಜೆಪಿ ಸಂಸದ ಮತ್ತು ಭೋಜ್ಪುರಿ ನಟ ದಿನೇಶ್ ಲಾಲ್ ಯಾದವ್ ‘ನಿರಹುವಾ’, ಕ್ರೀಡಾಪಟು ಮನು ಭಾಕರ್, ಕ್ರೀಡಾಪಟು ಮೀರಾಬಾಯಿ ಚಾನು, ಹಿರಿಯ ಮಲೆಯಾಳಂ ಚಲನಚಿತ್ರ ನಟ ಮೋಹನ್ ಲಾಲ್, ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಹಿಂದಿ ಮತ್ತು ತಮಿಳು ಚಲನಚಿತ್ರ ನಟ ಆರ್. ಮಾಧವನ್, ಖ್ಯಾತ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ ಮತ್ತು ಇನ್ಫೋಸಿಸ್ ಸಂಸ್ಥಾಪಕಿ ಮತ್ತು ರಾಜ್ಯಸಭಾ ಸಂಸದೆ ಸುಧಾ ಮೂರ್ತಿ ಹೆಸರನ್ನು ಮೋದಿ ನಾಮ ನಿರ್ದೇಶನ ಮಾಡಿದ್ದಾರೆ.
ಪ್ರಧಾನಿ ಮೋದಿ ನಾಮ ನಿರ್ದೇಶನಗೊಂಡ ವ್ಯಕ್ತಿಗಳು ಇತರ 10 ಜನರನ್ನು ನಾಮನಿರ್ದೇಶನ ಮಾಡುವಂತೆ ವಿನಂತಿಸಿದರು. ಪ್ರಧಾನಿ ಮೋದಿಯವರ ಟ್ವೀಟ್ಗೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಪ್ರತಿಕ್ರಿಯಿಸಿ, ಅಭಿಯಾನಕ್ಕೆ ಸೇರಲು ಸಂತೋಷ ವ್ಯಕ್ತಪಡಿಸಿದರು. ಈ ಅಭಿಯಾನ ಉತ್ತೇಜಿಸಲು ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ನಟಿ ದೀಪಿಕಾ ಪಡುಕೋಣೆ ಮತ್ತು ಕ್ರಿಕೆಟ್ ಆಟಗಾರ ಇರ್ಫಾನ್ ಪಠಾಣ್ ಸೇರಿದಂತೆ ಇತರ 10 ಜನರನ್ನು ನಾಮನಿರ್ದೇಶನ ಮಾಡಿದರು.