ಚೆನ್ನೈ, ಫೆ.26 (DaijiworldNews/AA): ತಮಿಳುನಾಡಿನಲ್ಲಿ ನಟಿ ರಂಜನಾ ನಚ್ಚಿಯಾರ್ ಇಂದು ಬಿಜೆಪಿ ತೊರೆದು ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಸೇರ್ಪಡೆಗೊಂಡಿದ್ದಾರೆ.

8 ವರ್ಷಗಳ ಹಿಂದೆ ಬಿಜೆಪಿ ಸೇರಿದ್ದ ಅವರು ಹಿಂದಿ ಹೇರಿಕೆ ಸೇರಿದಂತೆ ಬಿಜೆಪಿಯ ಕೆಲವು ನೀತಿಗಳನ್ನ ವಿರೋಧಿಸಿ ನಿನ್ನೆ ರಾಜೀನಾಮೆ ನೀಡಿದ್ದರು. ಇದೀಗ ಇಂದು ನಟ ವಿಜಯ್ ಅವರ ಟಿವಿಕೆ ಸೇರಿದ್ದಾರೆ. ಚೆನ್ನೈ ಬಳಿಯ ಖಾಸಗಿ ರೆಸಾರ್ಟ್ನಲ್ಲಿ ವಿಜಯ್ ಆಯೋಜಿಸಿದ್ದ ಟಿವಿಕೆ ವಾರ್ಷಿಕೋತ್ಸವದ ಸಮಾರಂಭದಲ್ಲಿ ಇಂದು ಬೆಳಿಗ್ಗೆ ಹಾಜರಿದ್ದ ರಂಜನಾ ನಚ್ಚಿಯಾರ್ ತಮ್ಮ ಹೊಸ ರಾಜಕೀಯ ಮುಖ್ಯಸ್ಥರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ವಿಜಯ್ ಅವರನ್ನು 'ಭವಿಷ್ಯದ ಎಂಜಿಆರ್' ಎಂದು ಕರೆದಿದ್ದಾರೆ.
1970 ಮತ್ತು 80ರ ದಶಕಗಳಲ್ಲಿ 10 ವರ್ಷ ಸಿಎಂ ಆಗಿದ್ದ ಮತ್ತು ಪ್ರಸ್ತುತ ವಿರೋಧ ಪಕ್ಷದಲ್ಲಿರುವ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಅನ್ನು ಸ್ಥಾಪಿಸಿದ ದಿವಂಗತ ನಟ-ರಾಜಕಾರಣಿ ಎಂ.ಜಿ. ರಾಮಚಂದ್ರನ್ ಅವರ ಜೊತೆ ವಿಜಯ್ ದಳಪತಿ ಅವರನ್ನು ರಂಜನಾ ಹೋಲಿಸಿದ್ದಾರೆ. ಹಾಗೂ ವಿಜಯ್ ತಮಿಳುನಾಡಿಗೆ ದೊಡ್ಡ ಭರವಸೆ ಎಂದು ನಟಿ ರಂಜನಾ ತಿಳಿಸಿದ್ದಾರೆ.
ಇನ್ನು ಬಿಜೆಪಿಗೆ ರಂಜನಾ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ ಒಬ್ಬ ತಮಿಳು ಮಹಿಳೆಯಾಗಿ ತ್ರಿಭಾಷಾ ನೀತಿಯ ಹೇರಿಕೆ, ದ್ರಾವಿಡರ ಬಗ್ಗೆ ಹೆಚ್ಚುತ್ತಿರುವ ದ್ವೇಷ ಮತ್ತು ತಮಿಳುನಾಡಿನ ಅಗತ್ಯತೆಗಳ ನಿರ್ಲಕ್ಷ್ಯವನ್ನು ನಾನು ಒಪ್ಪಲು ಸಾಧ್ಯವಿಲ್ಲ ಎಂದು ಉಲ್ಲೇಖಿಸಿದ್ದಾರೆ.