ಬೆಂಗಳೂರು, ಫೆ.27(DaijiworldNews/AK): ಸಾವಿರ ಜನ ವಿರೋಧ ಮಾಡಲಿ ಇದು ನನ್ನ ನಂಬಿಕೆ ವಿಚಾರ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಇಶಾ ಫೌಂಡೇಶನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದನ್ನು ಸಮರ್ಥಿಸಿಕೊಂಡ ಅವರು, ಯಾರೆಲ್ಲ ಟ್ವೀಟ್ ಮಾಡುತ್ತಾರೆ. ಅವರಿಗೆಲ್ಲ ನಾನು ಉತ್ತರ ನೀಡಲು ಹೋಗುವುದಿಲ್ಲ ದೊಡ್ಡನಾಯಕರ ಮಾತಿಗೆ ನಾನು ಉತ್ತರ ನೀಡುವುದಿಲ್ಲ. ನಾನು ಹೋಗಿದ್ದು ಶಿವನರಾತ್ರಿಗೆ. ಇದು ನನ್ನ ಸ್ವಂತ ನಂಬಿಕೆ ಎಂದು ತಿರುಗೇಟು ನೀಡಿದರು.
ಯಾವ ಬಿಜೆಪಿಯ ಸ್ವಾಗತ ಬೇಡ, ಕಾಂಗ್ರೆಸ್ ಅವರು ಸ್ವಾಗತ ಮಾಡುವುದು ಬೇಡ. ಮಾಧ್ಯಮಗಳು ಮಾತನಾಡುವ ಅವಶ್ಯಕತೆ ಇಲ್ಲ. ಇದು ನನ್ನ ವೈಯಕ್ತಿಕ ನಂಬಿಕೆ ಹೋಗಿದ್ದೇನೆ ಎಂದರು.
ರಾಹುಲ್ ಗಾಂಧಿ ಅವರನ್ನು ಸದ್ಗುರು ವಿರೋಧ ಮಾಡಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದರ ಬಗ್ಗೆ ನನಗೆ ಗೊತ್ತಿಲ್ಲ. ಯಾರು ಏನು ಕಾಮೆಂಟ್ ಮಾಡಿದ್ದಾರೆ ನಾನು ನೋಡಿಲ್ಲ. ನನಗೆ ಸದ್ಗುರು ನಮ್ಮ ರಾಜ್ಯದವರು, ಮೈಸೂರಿನವರು. ಕಾವೇರಿ ವಿಚಾರದಲ್ಲಿ ಹೋರಾಟ ಮಾಡಿದ್ದರು. ಸೇವ್ ಸಾಯಲ್ ಅಂತ ಅಭಿಯಾನ ಮಾಡಿದ್ದರು. ನಮ್ಮ ರಾಜ್ಯದಲ್ಲಿ ಅವರ ಫೌಂಡೇಶನ್ನಿಂದ ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಅವರೇ ಖುದ್ದು ಬಂದು ಕರೆದಿದ್ದಕ್ಕೆ ಹೋಗಿದ್ದೇನೆ. ನಾನು ಅವರ ಅಚಾರ, ವಿಚಾರ ಮೆಚ್ಚಿಕೊಂಡಿದ್ದೇನೆ ಎಂದು ಹೇಳಿದರು.