ಬೆಂಗಳೂರು, ಮಾ.02 (DaijiworldNews/AA): ಒಂದನೇ ತರಗತಿಗೆ ಶಾಲೆಗೆ ದಾಖಲಾತಿ ಪಡೆಯಲು ಜೂನ್ 1 ಕ್ಕೆ 6 ವರ್ಷ ತುಂಬಿರಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಸರ್ಕಾರ ಈ ನಿಯಮ ಸಡಿಲಿಕೆ ಮಾಡಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.

ಹೌದು ಶಾಲಾ ಶಿಕ್ಷಣ ಇಲಾಖೆ ಹೊರಡಿಸಿರುವ ಈ ಸುತ್ತೋಲೆ ಪೋಷಕರ ನಿದ್ದೆಗೆಡಿಸಿದ್ದು, ಈ ಬಾರಿ ಯುಕೆಜಿ ತೇರ್ಗಡೆ ಹೊಂದಲಿರುವ ಲಕ್ಷಾಂತರ ಮಕ್ಕಳು 1ನೇ ತರಗತಿಗೆ ದಾಖಲಾತಿ ಪಡೆಯಲು ಆಗದೆ ಮನೆಯಲ್ಲೇ ಕೂರುವ ಭೀತಿ ನಿರ್ಮಾಣವಾಗಿದೆ. ಹೀಗಾಗಿ ಪೋಷಕರು ಈ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಈ ವಿಚಾರವಾಗಿ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಪೋಷಕರ ಸಮೂಹ, ಈಗಾಗಲೇ ಲಕ್ಷಾಂತರ ಮಂದಿ ಮಕ್ಕಳು ಯುಕೆಜಿ ತೇರ್ಗಡೆ ಹೊಂದುತ್ತಿದ್ದು, 6 ವರ್ಷ ತುಂಬಲು 5, 10 ದಿನಗಳಷ್ಟೇ ಬಾಕಿ ಇದೆ. ಸರ್ಕಾರದ ಈ ಸುತ್ತೋಲೆಗೆ ಪರಿಣಾಮ ಇವರೆಲ್ಲ ಒಂದನೇ ತರಗತಿಗೆ ಪ್ರವೇಶ ಸಿಗದೇ ಶೈಕ್ಷಣಿಕ ಸಮಯ ವ್ಯರ್ಥ ಮಾಡಿಕೊಳ್ಳುವ ಭೀತಿಯಲ್ಲಿ ಇದ್ದಾರೆ. ಹೀಗಾಗಿ ಸರ್ಕಾರ ಈ ನಿಯಮ ಇದೊಂದು ಬಾರಿ ಸಡಿಲಿಕೆ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ
ಇನ್ನು ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಪ್ರಕರಣ ನ್ಯಾಯಾಲಯ ಹಂತದಲ್ಲಿದೆ. ಪೋಷಕರು ಹಾಗೂ ಮಕ್ಕಳ ಮನವಿ ಬಗ್ಗೆ ನನಗೂ ಸಹಾನುಭೂತಿ ಇದೆ. ಮುಂದಿನ ದಿನಗಳಲ್ಲಿ ಕೋರ್ಟ್ ನಿರ್ದೇಶನದ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ.