ಅಮ್ರೋಹಾ, ಮಾ.02(DaijiworldNews/TA) : ಉತ್ತರಪ್ರದೇಶದ ಮಹಿಳೆಯೊಬ್ಬಳು ತನ್ನ ಸಾಕು ಬೆಕ್ಕಿನ ಶವದೊಂದಿಗೆ ಎರಡು ದಿನ ಕಾಲ ಕಳೆದು ತದನಂತರ ಮನನೊಂದು ನೇಣಿಗೆ ಶರಣಾದ ಘಟನೆ ನಡೆದಿದೆ.

ಅಮ್ರೋಹಾದ ಹಸನ್ಪುರದ ನಿವಾಸಿ 32 ವರ್ಷದ ಪೂಜಾ ಎಂಬಾಕೆ ತನ್ನ ಏಕಾಂಗಿ ಜೀವನಕ್ಕೆ ಜಂಟಿಯಾಗಿ ಬೆಕ್ಕೊಂದನ್ನು ತನ್ನ ಮಗುವಿನಂತೆ ಸಾಕಿ ಸಲಹಿದ್ದಳು. ಕಾರಣ ಆಕೆ ತನ್ನ ಪತಿಯಿಂದ ಬೇರ್ಪಟ್ಟು ತನ್ನ ತವರು ಮನೆಯಲ್ಲಿ ಒಂಟಿ ಜೀವನ ಸಾಗಿಸುತ್ತಿದ್ದಳು.
ದತ್ತುಪಡೆದು ಲಾಲಿಸುತ್ತಿದ್ದ ಬೆಕ್ಕು ಅಚಾನಕ್ಕಾಗಿ ಇಹಲೋಕ ತ್ಯಜಿಸಿತು. ಆಕೆಯ ಪ್ರೀತಿಯಿಂದಾಗಿ ಆಕೆಗೆ ತನ್ನ ಬೆಕ್ಕು ಸತ್ತುಹೋಗಿದೆ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದುದರಿಂದಾಗಿ ಆಕೆ ತನ್ನ ಬೆಕ್ಕು ಸತ್ತಿಲ್ಲ ಮತ್ತೆ ಬದುಕಿ ಬರುತ್ತದೆ ಎಂಬ ಕುರುಡು ನಂಬಿಕೆಯೊಂದಿಗೆ ಎರಡು ದಿನಗಳ ಕಾಲ ಅದರ ಶವದೊಂದಿಗೆ ಕಾಲ ಕಳೆದಳು. ಮೊದಲೇ ಒಂಟಿ ಜೀವನ ನಡೆಸುತ್ತಿದ್ದಾಕೆ ನಂಬಿಕೆ ಸುಳ್ಳಾಯಿತು ಎಂದು ಮನನೊಂದು ತಾನು ನೇಣಿಗೆ ಶರಣಾದಳು.
ಶನಿವಾರ ಪೂಜಾಳನ್ನು ನೋಡಲೆಂದು ತಾಯಿ ಕೋಣೆಗೆ ಬಂದಾಗ ಪೂಜಾಳ ದೇಹವು ಸೀಲಿಂಗ್ ಫ್ಯಾನ್ನಲ್ಲಿ ನೇತಾಡುತ್ತಿದ್ದು, ಹತ್ತಿರದಲ್ಲಿ ಬೆಕ್ಕಿನ ಶವ ಇರುವುದು ಕಂಡರು. ನಂತರ ತಾಯಿಯ ಚೀರಾಟ ಅಕ್ಕ ಪಕ್ಕದ ಮನೆಯವರು ಅಲ್ಲಿಗೆ ಜಮಾಯಿಸುವಂತೆ ಮಾಡಿತ್ತು.ತದನಂತರ ಪೊಲೀಸರಿಗೆ ಮಾಹಿತಿ ನೀಡಲಾಯಿತು.