ಮಂಡ್ಯ, ಮಾ.03 (DaijiworldNews/AA): ಗ್ಯಾರಂಟಿ ಯೋಜನೆಯಿಂದ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಕೆರೆ ಕಟ್ಟೆ ದುರಸ್ಥಿಗೂ ಸರ್ಕಾರದ ಬಳಿ ಹಣ ಇಲ್ಲ. ರಸ್ತೆ ಗುಂಡಿ ಮುಚ್ಚೋಕು ಸರ್ಕಾರದ ಬಳಿ ದುಡ್ಡಿಲ್ಲ ಎಂದು ಕೆ.ಆರ್ ಪೇಟೆ ಶಾಸಕ ಹೆಚ್.ಟಿ ಮಂಜು ತಿಳಿಸಿದ್ದಾರೆ.

ಮಂಡ್ಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಕೆಟ್ಟ ಸಮಯದಲ್ಲಿ ಶಾಸಕನಾಗಿದ್ದೇನೆ. ಕ್ಷೇತ್ರದಲ್ಲಿ ಕನಿಷ್ಠ ಪ್ರಮಾಣದ ಕೆಲಸವನ್ನೂ ಮಾಡಲು ಆಗುತ್ತಿಲ್ಲ. ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಅನುದಾನ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ರಸ್ತೆ ಗುಂಡಿ ಮುಚ್ಚುವುದಕ್ಕೂ ಹಣ ಕೊಡುತ್ತಿಲ್ಲ ಎಂದರು.
ಅನುದಾನಕ್ಕಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಕೆರೆ ಕಟ್ಟೆಗಳು ಒಡೆದು ಮೂರ್ನಾಲ್ಕು ವರ್ಷಗಳಾಗಿವೆ. ಮಳೆಯಿಂದ ಒಡೆದ ಕೆರೆ ಏರಿ ದುರಸ್ತಿ ಮಾಡಿಸಲು ಸರ್ಕಾರ ಹಣ ನೀಡುತ್ತಿಲ್ಲ. ಈ ಬಗ್ಗೆ ಅಧಿವೇಶನದಲ್ಲೂ ಮಾತನಾಡಿದ್ದೇನೆ. ಸಿಎಂ ಸಿದ್ದರಾಮಯ್ಯ ಅವರಿಗೆ ನೇರವಾಗಿ ಮನವಿ ಮಾಡಿಕೊಂಡಿದ್ದೇನೆ. ಮನವಿ ಸಲ್ಲಿಸಿದಾಗ ಸ್ಪಂದಿಸುವ ಭರವಸೆ ನೀಡಿದ್ದರು. ಆದರೆ ಈವರೆಗೂ ಹಣ ಬಿಡುಗಡೆಯಾಗಿಲ್ಲ ಎಂದು ಹೇಳಿದ್ದಾರೆ.
ನಮ್ಮ ಕ್ಷೇತ್ರದ ರೈತರ ಸ್ಥಿತಿ ಶೋಚನೀಯವಾಗಿದೆ. ರಸ್ತೆಗಳಲ್ಲಿ ಮಂಡಿ ಉದ್ದದ ಗುಂಡಿ ಬಿದ್ದಿವೆ. ಇದರಿಂದ ಸಣ್ಣ ಸಣ್ಣ ವಾಹನಗಳು ಸಂಚಾರ ಮಾಡೋದಕ್ಕೂ ಸಾದ್ಯವಾಗುತ್ತಿಲ್ಲ. ಬಜೆಟ್ ಅಧಿವೇಶನದಲ್ಲಿ ಅನುದಾನಕ್ಕಾಗಿ ಅಂತಿಮವಾಗಿ ಮಾನವಿ ಮಾಡುತ್ತೇನೆ. ಆಗಲೂ ಸ್ಪಂದಿಸದಿದ್ದರೆ ರೈತರೊಂದಿಗೆ ಸೇರಿ ಪಾದಯಾತ್ರೆ ಮಾಡುತ್ತೇನೆ. ಆ ಪಾದಯಾತ್ರೆಗೆ ನಿಖಿಲ್ ಕುಮಾರಸ್ವಾಮಿ ಚಾಲನೆ ನೀಡುತ್ತಾರೆ. ಹೋರಾಟದ ಮೂಲಕ ಅನುದಾನ ಪಡೆದುಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.