ಶ್ರೀನಗರ, ಮಾ.03 (DaijiworldNews/AA): ಪಾಕಿಸ್ತಾನ ಮೂಲದ ಮೂವರು ಭಯೋತ್ಪಾದಕರಿಗೆ ಸೇರಿದ 28 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಒಟ್ಟು 1.8 ಎಕರೆ ಭೂಮಿಯನ್ನು ಪೂಂಚ್ ಪೊಲೀಸರು ಜಪ್ತಿ ಮಾಡಿದ್ದಾರೆ.

ಪೂಂಚ್ ಜಿಲ್ಲೆಯ ಕಿರ್ನಿ ಗ್ರಾಮದ ನಜಾಬ್ ದಿನ್, ಮೊಹಮ್ಮದ್ ಲತೀಫ್ ಮತ್ತು ಕಸ್ಬಾದ ಮೊಹಮ್ಮದ್ ಬಶೀರ್ ಅಲಿಯಾಸ್ ಟಿಕ್ಕಾ ಖಾನ್ಗೆ ಈ ಭೂಮಿ ಸೇರಿವೆ. ಕಂದಾಯ ಅಧಿಕಾರಿಗಳ ಜೊತೆ ಪೊಲೀಸರು ಭಯೋತ್ಪಾದಕರ ಜಾಗವನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೂಂಚ್ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶಫ್ಕೇತ್ ಹುಸೇನ್ ಮಾಹಿತಿ ನೀಡಿದ್ದಾರೆ.
ಈ ಮೂವರು ಭಯೋತ್ಪಾದಕರು ಪಾಕಿಸ್ತಾನಕ್ಕೆ ಪಲಾಯನಗೈದಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸುವ, ಶಾಂತಿಯನ್ನು ಕದಡುವ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವ ಕಾರ್ಯದಲ್ಲಿ ಮೂವರು ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ತಿಳಿದುಬಂದಿದೆ.