ಬೆಂಗಳೂರು, ಮಾ.04(DaijiworldNews/AK): ಯಕ್ಷಗಾನ ಪ್ರದರ್ಶನ ಕಾರ್ಯಕ್ರಮಕ್ಕೆ ಅನುಮತಿ ನೀಡುವ ನಿಯಮಗಳನ್ನು ಸರಳೀಕರಣಗೊಳಿಸುವಂತೆ ವಿಧಾನಸಭೆಯಲ್ಲಿ ಗಮನಸೆಳೆಯುವ ಸೂಚನೆ ವೇಳೆ ಬಿಜೆಪಿ ಶಾಸಕ ಸುನೀಲ್ ಕುಮಾರ್ ಪ್ರಸ್ತಾಪ ಮಾಡಿದರು.

ಉಡುಪಿ- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮಗಳನ್ನು ನಿಲ್ಲಿಸುವಂತೆ ಎಫ್ಐಆರ್ ದಾಖಲು ಮಾಡುತ್ತಿದ್ದಾರೆ. ಧ್ವನಿವರ್ಧಕ ಬಳಕೆ ಸೇರಿದಂತೆ ಹಲವು ಅಡೆತಡೆಗಳು ಇವೆ. ಯಕ್ಷಗಾನ ಪ್ರದರ್ಶನಕ್ಕೆ ಅನುಮತಿ ಸರಳೀಕರಣಗೊಳಿಸಿ ಎಂದು ಸುನೀಲ್ ಕುಮಾರ್ ಮನವಿ ಮಾಡಿದರು.
ಈ ವೇಳೆ ಸ್ಪೀಕರ್ ಖಾದರ್ ಮಾತನಾಡಿ, ಮೊದಲು ಈ ರೀತಿ ಇರಲಿಲ್ಲ. ರಾತ್ರಿ 10 ಗಂಟೆ ಮೇಲೆ ಧ್ವನಿವರ್ಧಕ ಬಳಸಬಾರದು ಎಂದು ನಿಯಮ ತಂದರು. ಆದಾದ ಮೇಲೆ ಒಂದೊಂದು ಕಡೆ ಒಬ್ಬಬ್ಬ ಅಧಿಕಾರಿಗಳು ನಿಯಮ ಮಾಡುತ್ತಿದ್ದಾರೆ ಸರ್ಕಾರ ಇದನ್ನು ಸರಿಪಡಿಸುವಂತೆ ಎಂದು ಸೂಚಿಸಿದರು.
ಗೃಹ ಸಚಿವರ ಪರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಉತ್ತರ ನೀಡಿ, ನಮ್ಮ ಸಂಸ್ಕೃತಿಗೆ ತೊಂದರೆ ಆಗಬಾರದು. ಯಕ್ಷಗಾನ, ಬಯಲಾಟ ನಮ್ಮ ದೇಶದ ಆಸ್ತಿ, ಇದನ್ನ ನಿಲ್ಲಿಸಲು ಆಗುವುದಿಲ್ಲ. ಯಾವುದೇ ಸಮಸ್ಯೆ ಇಲ್ಲದೇ ಸರಳೀಕರಣ ಮಾಡುತ್ತೇವೆ. ಮಧ್ಯರಾತ್ರಿ ನಿಲ್ಲಿಸುವಂತೆ ಯಾರೂ ಹೇಳಲ್ಲ. ಗೃಹ ಸಚಿವರು ಬರಲಿ ಅದನ್ನ ಸರಿ ಮಾಡೋಣ ಎಂದು ಭರವಸೆ ನೀಡಿದರು.
ಈ ವೇಳೆ ಊರುಗಳಲ್ಲಿ ನಾಟಕ ಪ್ರದರ್ಶನಕ್ಕೂ ಅಡೆತಡೆ ಉಂಟಾಗುತ್ತಿದೆ ಎಂದು ಶಾಸಕ ನೇಮಿರಾಜ್ ನಾಯ್ಕ್ ಪ್ರಸ್ತಾಪಿಸಿದ್ದಾರೆ. ಇದೇ ವೇಳೆ ಮಧ್ಯೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಪ್ರಸ್ತಾಪಿಸಿ, ಕೋಳಿಅಂಕ, ನಾಗಮಂಡಲಕ್ಕೂ ಅಡೆತಡೆ ಉಂಟುಮಾಡುತ್ತಿದ್ದಾರೆ. ಅದರ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಇದೇ ವೇಳೆ ಮಧ್ಯಪ್ರವೇಶ ಮಾಡಿದ ಮಾತನಾಡಿದ ಸುನೀಲ್ ಕುಮಾರ್, ಕೋಳಿ ಅಂಕ ಮೊದಲಿನಿಂದಲೂ ಇದೆ. ಕೋಳಿ ಅಂಕದ ಕೋಳಿ ರುಚಿ ಬಹಳ ಚೆನ್ನಾಗಿದೆ. ನೀವು ಬಂದರೆ ಆ ರುಚಿ ತೋರಿಸುತ್ತೇವೆ ಎಂದು ಡಿಕೆಶಿಗೆ ಸುನೀಲ್ ಹೇಳಿದರು.