ಹೈದರಾಬಾದ್, ಮಾ.05(DaijiworldNews/TA): ಜನಪ್ರಿಯ ತೆಲುಗು ಗಾಯಕಿ ಕಲ್ಪನಾ ರಾಘವೇಂದ್ರರ್ ಹೈದರಾಬಾದ್ನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

ಗಾಯಕಿ 2 ದಿನಗಳಿಂದ ಮನೆಯ ಬಾಗಿಲುಗಳು ತೆರೆಯದ ಕಾರಣ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ದಾವಿಸಿದ ಪೊಲೀಸರು ಗಾಯಕಿಯ ಮನೆಯ ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಆಗ ಬಾಗಿಲನ್ನು ಒಡೆದಿದ್ದಾರೆ. ಈ ವೇಳೆ, ಅವರು ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿದ್ದರು ಎನ್ನಲಾಗಿದೆ. ಆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ವೈದ್ಯರ ಪ್ರಕಾರ ಕಲ್ಪನಾ, ನಿದ್ರೆ ಮಾತ್ರೆಗಳನ್ನು ಸೇವಿಸಿದ್ದಾರೆಂದು ಹೇಳಿದ್ದು, ಆಕೆಗೆ ಪ್ರಜ್ಞೆ ಬಂದ ನಂತರ ಹೆಚ್ಚಿನ ಮಾಹಿತಿ ದೊರೆಯಲಿದೆ ಎಂದು ಕೆಪಿಎಚ್ಬಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರು "ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಕಲ್ಪನಾ ಅವರು ಐಡಿಯಾ ಸ್ಟಾರ್ ಸಿಂಗರ್ ಮಲಯಾಳಂ ಐದನೇ ಸೀಸನ್ನ ವಿಜೇತರಾಗಿದ್ದರು. ಅವರು ಬಿಗ್ ಬಾಸ್ ತೆಲುಗು ಸೀಸನ್ ಒಂದರಲ್ಲಿ ಭಾಗವಹಿಸಿದ್ದರು. ಅವರು ಐದನೇ ವಯಸ್ಸಿನಲ್ಲಿ ಹಿನ್ನೆಲೆ ಗಾಯಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 2013 ರ ಹೊತ್ತಿಗೆ, ಅವರು 1,500 ಹಾಡುಗಳನ್ನು ರೆಕಾರ್ಡ್ ಮಾಡಿದ್ದರು. ಅವರು ಪ್ರಸಿದ್ಧ ಹಿನ್ನೆಲೆ ಗಾಯಕರಾದ ಟಿಎಸ್ ರಾಘವೇಂದ್ರ ಮತ್ತು ಸುಲೋಚನಾ ಅವರ ಪುತ್ರಿ.