ಬೆಂಗಳೂರು,ಮಾ.05 (DaijiworldNews/AK): ಗ್ಯಾರಂಟಿಗಳನ್ನು ಸರಿಯಾಗಿ ಅನುಷ್ಠಾನ ಮಾಡಲು ಸಾಧ್ಯವಾಗದೆ ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ದುರುಪಯೋಗ ಪಡಿಸಿದ ಭ್ರಷ್ಟ, ದುಷ್ಟ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ಎಚ್ಚರಿಕೆ ನೀಡಲು ನಾವು ಇಲ್ಲಿ ಸೇರಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದರು.

ನಗರದ ಫ್ರೀಡಂ ಪಾರ್ಕ್ನಲ್ಲಿ ಇಂದು ನಡೆದ ‘ಎಸ್ಸಿಪಿ-ಟಿಎಸ್ಪಿ ಹಣ ದುರ್ಬಳಕೆ’ ಮಾಡಿಕೊಂಡ ದಲಿತ ವಿರೋಧಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ದುಷ್ಟ, ದಲಿತ ವಿರೋಧಿ ಕಾಂಗ್ರೆಸ್ ಸರಕಾರಕ್ಕೆ ತಕ್ಕ ಪಾಠ ಕಲಿಸಬೇಕಾಗಿದೆ. ನಮ್ಮ ಹೋರಾಟ ನಿರಂತರವಾಗಿರಲು ಕೈಜೋಡಿಸಿ ಎಂದು ಕರೆ ನೀಡಿದರು. ನಾಳೆ ಬೆಳಿಗ್ಗೆ ಇದೇ ಜಾಗದಲ್ಲಿ ಬೃಹತ್ ಹೋರಾಟ ನಡೆಯಲಿದೆ. ಎಲ್ಲರೂ ಭಾಗವಹಿಸಿ ಎಂದು ಮನವಿ ಮಾಡಿದರು.
ಬಿಜೆಪಿ ಸರಕಾರಗಳು ಪರಿಶಿಷ್ಟ ಜಾತಿ, ಪಂಗಡದ ಹಣ ದುರ್ಬಳಕೆ ಮಾಡಿಲ್ಲ; ಮಾಡುವುದೂ ಇಲ್ಲ ಎಂದು ಹೇಳಿದರು. ಈ ದಲಿತ ವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ನಿರಂತರ ಹೋರಾಟ ಮಾಡುತ್ತ ಬಂದಿದೆ ಎಂದು ಅವರು ನುಡಿದರು. ಬಿಜೆಪಿ ಯಾವತ್ತೂ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳ ಪರವಾಗಿದೆ ಎಂದು ವಿವರಿಸಿದರು.
ಸಚಿವರೊಬ್ಬರು ಬಿಜೆಪಿ ಆಡಳಿತದ ಇತರ ರಾಜ್ಯಗಳ ಸರಕಾರಗಳ ಕುರಿತು ತಪ್ಪು ಮಾಹಿತಿ ನೀಡಿದ್ದಾಗಿ ಆಕ್ಷೇಪಿಸಿದರು.
ರಾಜ್ಯದ ಎಸ್ಸಿ, ಎಸ್ಟಿ ಸಮುದಾಯಗಳ ಹಣವನ್ನು ದುರುಪಯೋಗ ಮಾಡುವ ದುಷ್ಟ ಕಾಂಗ್ರೆಸ್ ಸರಕಾರದ ವಿರುದ್ಧ 14 ತಂಡಗಳನ್ನು ರಚಿಸಿ ಜನಾಂದೋಲನ ರೂಪಿಸಲಾಗಿದೆ. ಚುನಾವಣೆ ಪೂರ್ವದಲ್ಲಿ ಎಸ್ಸಿ, ಎಸ್ಟಿ ಸಮುದಾಯ ಸೇರಿ ಎಲ್ಲರಿಗೂ ನ್ಯಾಯ ಕೊಡುವುದಾಗಿ ಹಾಗೂ ಅಭಿವೃದ್ಧಿ ಮಾಡುವುದಾಗಿ ಕಾಂಗ್ರೆಸ್ ಹೇಳಿ ಅಧಿಕಾರಕ್ಕೆ ಬಂದಿದೆ ಎಂದು ವಿವರಿಸಿದರು.
ಕಾರ್ಯಕರ್ತರಿಗೆ ಶಕ್ತಿ ತುಂಬುವ ಚುನಾವಣೆ:
ಬಿಬಿಎಂಪಿಯಲ್ಲಿ ಬಿಜೆಪಿ ಸ್ವಂತ ಶಕ್ತಿಯಲ್ಲಿ ಅಧಿಕಾರ ಪಡೆಯುವಂತಾಗಬೇಕಿದೆ. ಮುಂದಿನ ಬಿಬಿಎಂಪಿ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯು ಕಾರ್ಯಕರ್ತರಿಗೆ ಶಕ್ತಿ ತುಂಬಲಿದೆ. ನಾವೆಲ್ಲರೂ ಒಗ್ಗೂಡಿ ಕಾರ್ಯಕರ್ತರ ಚುನಾವಣೆ ಎದುರಿಸಿ ಗೆಲ್ಲಿಸಲಿದ್ದೇವೆ ಎಂದು ವಿಶ್ವಾಸದಿಂದ ತಿಳಿಸಿದರು.