ಬೆಂಗಳೂರು, ಮಾ.06(DaijiworldNews/AK): ಲಜ್ಜೆಗೆಟ್ಟ ಕಾಂಗ್ರೆಸ್ ಸರಕಾರ ಇಡುವ ಒಂದೊಂದು ಹೆಜ್ಜೆಯೂ ಬಡವರಿಗೆ ಮಾರಕವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಟೀಕಿಸಿದ್ದಾರೆ.

ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಶ್ನೆಗೆ ಉತ್ತರಿಸಿದರು.ಬಡವರು ಕಣ್ಣೀರು ಹಾಕುತ್ತಿದ್ದಾರೆ. ಈ ಸರಕಾರದ ಕ್ರಮಗಳು ರೈತರಿಗೆ ಶಾಪವಾಗಿ ಪರಿಣಮಿಸಿದೆ ಎಂದು ಆಕ್ಷೇಪಿಸಿದರು. ಗ್ಯಾರಂಟಿಗೆ ಹಣ ಕ್ರೋಡೀಕರಿಸಲು ಜನರ ಮೇಲೆ ಬರೆ ಎಳೆಯುತ್ತಿದ್ದಾರೆ ಎಂದು ತಿಳಿಸಿದರು.
ಎರಡನೇ ಬಾರಿಗೆ ಇದೀಗ ಹಾಲಿನ ದರ ಏರಿಸುತ್ತಿದ್ದಾರೆ. ಹಿಂದಿನ ಬಿಜೆಪಿ ಸರಕಾರವು ಹೈನುಗಾರರಿಗೆ ಪ್ರೋತ್ಸಾಹಧನ ನೀಡುತ್ತಿತ್ತು. ಆದರೆ, ಕಾಂಗ್ರೆಸ್ ಸರಕಾರವು ಹೈನುಗಾರರ ಪ್ರೋತ್ಸಾಹಧನ 700- 800 ಕೋಟಿ ಬಾಕಿ ಉಳಿಸಿಕೊಂಡಿದೆ ಎಂದರು. ಸರಕಾರವು ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಹೇಳಿದರು.
ಪ್ರಿಯಾಂಕ್ ಖರ್ಗೆಯವರು ಬುರುಡೆ ಬಿಡುತ್ತಿದ್ದಾರೆ
ಪ್ರಿಯಾಂಕ್ ಖರ್ಗೆಯವರು ಬುರುಡೆ ಬಿಡುತ್ತಿದ್ದಾರೆ. ಬೇರೆ ರಾಜ್ಯಗಳಲ್ಲಿ ಎಸ್ಸಿ, ಎಸ್ಟಿ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿದ್ದರೆ ವಿಪಕ್ಷವಾದ ಇವರೇನು ಕತ್ತೆ ಕಾಯುತ್ತಿದ್ದಾರಾ? ಪ್ರಶ್ನೆ ಮಾಡಲಿ ಎಂದು ಈ ಸಂಬಂಧ ಪ್ರಶ್ನೆಗೆ ಉತ್ತರ ನೀಡಿದರು. ಇಲ್ಲಿ ತಮ್ಮ ಹುಳುಕು ಮುಚ್ಚಿ ಹಾಕಿಕೊಳ್ಳುವ ಸಲುವಾಗಿ ಬುರುಡೆ ಬಿಡುತ್ತಾರೆಯೇ ಹೊರತು ಅದರಲ್ಲಿ ಸತ್ಯ ಇದೆ ಎಂದು ನನಗೆ ಅನಿಸುತ್ತಿಲ್ಲ ಎಂದು ತಿಳಿಸಿದರು.
ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ ಸುಮಾರು 25 ಸಾವಿರ ಕೋಟಿ ಹಣವನ್ನು ಇಲ್ಲಿನವರೆಗೆ ದುರುಪಯೋಗ ಮಾಡಿಕೊಂಡಿದ್ದಾರೆ. ಈ ಅನ್ಯಾಯದ ವಿರುದ್ಧ ಬಿಜೆಪಿ ಕಳೆದ ಕೆಲದಿನಗಳಿಂದ 14 ತಂಡ ರಚಿಸಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದೆ. ಇವತ್ತು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಮಾಡಿದ್ದೇವೆ. ಈ ಬಜೆಟ್ನಲ್ಲಿ ಇಂಥ ದುರುಪಯೋಗ ಮಾಡಬಾರದು ಎಂದು ಆಗ್ರಹಿಸಿದರು.
ಕೇಂದ್ರದ ಗೃಹ ಸಚಿವ ಅಮಿತ್ ಶಾ ಜೀ ಅವರು ನಾಡಿದ್ದು 7ರಂದು ಬೆಂಗಳೂರಿನಲ್ಲಿ ಆಸ್ಪತ್ರೆ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದು ತಿಳಿಸಿದರು.
ಬಾಗಲಕೋಟೆಯಲ್ಲಿರುವ ತೋಟಗಾರಿಕಾ ವಿವಿ ಚೆನ್ನಾಗಿ ನಡೆಯುತ್ತಿದೆ. ಅನೇಕ ಶಿಕ್ಷಣ ಸಂಸ್ಥೆಗಳು ಅದರ ಅಡಿಯಲ್ಲಿವೆ. ಅದನ್ನು ಮಂಡ್ಯ ಜಿಲ್ಲೆಗೆ ತರುವ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದರು. ಮುಖ್ಯಮಂತ್ರಿಗಳು ಮತ್ತು ಚಲುವರಾಯಸ್ವಾಮಿ ಅವರು ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡುವುದನ್ನು ಬಿಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಬಿಜೆಪಿ ಅವಕಾಶ ಕೊಡುವುದಿಲ್ಲ ಎಂದು ತಿಳಿಸಿದರು.