ಬೆಂಗಳೂರು,ಮಾ.07 (DaijiworldNews/AK): ನನ್ನ ರಾಜಕೀಯ ಜೀವನದ 16ನೇ ಬಜೆಟ್ ಮಂಡನೆಗೆ ಈ ದಿನ ಸಿದ್ಧನಾಗಿದ್ದೇನೆ. ಹದಿನಾರು ಬಾರಿ ಈ ರಾಜ್ಯದ ಬಜೆಟ್ ಮಂಡನೆ ಮಾಡಲು ಅವಕಾಶ ನೀಡಿರುವ ಕರ್ನಾಟಕದ ಸಮಸ್ತ ಜನತೆಗೆ ನಾನು ಕೃತಜ್ಞ.ಬುದ್ಧ, ಬಸವ, ಗಾಂಧಿ, ಅಂಬೇಡ್ಕರರ ಆಶಯಗಳಲ್ಲಿ ನಂಬಿಕೆಯನ್ನಿಟ್ಟು, ಅದರಂತೆ ನಡೆಯುತ್ತಿರುವ ನಾವು ಈ ಬಜೆಟ್ ಮೂಲಕ ಸಮಸಮಾಜದ ಕನಸನ್ನು ನನಸಾಗಿಸುವತ್ತ ಮತ್ತಷ್ಟು ದೃಢಹೆಜ್ಜೆಯನ್ನಿಡುವ ಪ್ರಯತ್ನ ಮಾಡಿದ್ದೇವೆ. ಮುಂದಿನ ಒಂದು ವರ್ಷಗಳ ಕಾಲದ ರಾಜ್ಯದ ಸಮಗ್ರ ಅಭಿವೃದ್ಧಿಗೆ ಈ ಬಜೆಟ್ ದಾರಿದೀಪವಾಗಲಿದೆ ಎಂಬುದು ನಿಸ್ಸಂಶಯ ಎಂದುಈ ಬಾರಿಯ ಬಜೆಟ್ ಅಭಿವೃದ್ಧಿಯ ಬಜೆಟ್. ಈ ಸಲ ಗ್ಯಾರಂಟಿ ಮೀರಿ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಬಳಿಕ ವಿಧಾನಸೌಧದ ಸಚಿವ ಸಂಪುಟ ಸಭೆಯಲ್ಲಿ ಮಾತನಾಡಿದ ಅವರು ಸಹೋದ್ಯೋಗಿಗಳಿಗೆ ಬಜೆಟ್ ದಿಕ್ಕಿನ ಬಗ್ಗೆ ಸೂಕ್ಷ್ಮವಾಗಿ ತಿಳಿಸಿದರು. ಸಾಲವೂ ಇದೆ. ಆದರೆ ವಿತ್ತೀಯ ಶಿಸ್ತಿನೊಳಗೆ ಇದೆ. ಜಿಎಸ್ಡಿಪಿ 25% ಒಳಗೆ ಇದೆ. ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ ಎಂದರು.
ಈ ಬಾರಿ ಸಿದ್ದರಾಮಯ್ಯ ದಾಖಲೆಯ 16ನೇ ಬಜೆಟ್ ಮಂಡಿಸುತ್ತಿದ್ದು, ಬಜೆಟ್ ಗಾತ್ರ 4.09 ಲಕ್ಷ ಕೋಟಿ ಇದೆ. ಬಜೆಟ್ಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದಾರೆ. ಕಳೆದ ಬಾರಿಯ ಬಜೆಟ್ ಗಾತ್ರ 3.71 ಲಕ್ಷ ಕೋಟಿ ರೂ. ಆಗಿತ್ತು.