ಬೆಳಗಾವಿ, ಮಾ.08 (DaijiworldNews/AA): ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಮುಂಗಡಪತ್ರದಲ್ಲಿ ಒಂದು ಲಕ್ಷ ಕೋಟಿಗೂ ಅಧಿಕ ಸಾಲ ಮಾಡಲು ಪ್ರಸ್ತಾಪಿಸುವ ಮೂಲಕ ಅತಿ ಹೆಚ್ಚು ಸಾಲ ಮಾಡಿದ ಮುಖ್ಯಮಂತ್ರಿ ಎನ್ನುವ ದಾಖಲೆಗೆ ಪಾತ್ರರಾಗಿದ್ದಾರೆ ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ನಾಲ್ಕು ಲಕ್ಷ ಕೋಟಿಗೂ ಅಧಿಕ ಮೊತ್ತದ ರಾಜ್ಯ ಮುಂಗಡಪತ್ರ ಮಂಡಿಸಿದ್ದು, ಅದರಲ್ಲಿ 1 ಲಕ್ಷ ಕೋಟಿ ರೂಪಾಯಿ ಸಾಲ ಪಡೆಯುವುದಾಗಿ ಉದ್ದೇಶಿಸಿದ್ದಾರೆ. ಜೊತೆಗೆ ಈ ಬಾರಿ ಒಂಭತ್ತೂವರೆ ಸಾವಿರ ಕೋಟಿ ರೂಪಾಯಿ ತೆರಿಗೆ ಸಂಗ್ರಹ ಕಡಿತವಾಗಲಿದೆ ಎಂದು ಅಂದಾಜು ಮಾಡಿದ್ದಾರೆ. ಮೂಲಸೌಕರ್ಯ ಹೂಡಿಕೆಗೆ ಹೆಚ್ಚಿನ ಆದ್ಯತೆ ನೀಡಿದ್ದರೆ, ತೆರಿಗೆ ಕಡಿತ ಆಗುತ್ತಿರಲಿಲ್ಲ ಎಂದು ತಿಳಿಸಿದರು.
ಒಂದು ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ಆ ಸಮುದಾಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಜೊತೆಗೆ ಸರ್ಕಾರಿ ಕಾಮಗಾರಿಗಳಲ್ಲಿ ಮೀಸಲಾತಿಯನ್ನು ನೀಡಲು ಪ್ರಸ್ತಾಪಿಸಿದ್ದಾರೆ. ಸಂವಿಧಾನ ರಚನಾ ಸಮಿತಿಯಲ್ಲಿ ಧರ್ಮಾಧಾರಿತ ಮೀಸಲಾತಿ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಲಾಗಿತ್ತು. ಆದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಓಲೈಕೆ ರಾಜಕಾರಣ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಕಿಡಿಕಾರಿದರು.
ಮುಂಗಡ ಪತ್ರದಲ್ಲಿ ಆಸ್ತಿ ನೋಂದಣಿ ಶುಲ್ಕ, ವಾಹನ ನೋಂದಣಿ ಶುಲ್ಕ, ಆಸ್ಪತ್ರೆ ಸೇವಾ ಶುಲ್ಕ, ವಿದ್ಯುತ್, ಬಿತ್ತನೆ ಬೀಜ, ಮದ್ಯ, ಹಾಲು, ಪೆಟ್ರೋಲ್, ಡೀಸೆಲ್ ಸೇರಿದಂತೆ ಇನ್ನಿತರೆ ಸೇವೆಗಳ ಮೇಲೆ ತೆರಿಗೆಯನ್ನು ವಿಧಿಸಿ, ಜನಸಾಮಾನ್ಯರಿಗೆ ಹೊರೆ ಹೊರಿಸಿದ್ದಾರೆ ಎಂದರು.