ಮಂಡ್ಯ, ಮಾ.09 (DaijiworldNews/AA): ರಾಜ್ಯ ಬಜೆಟ್ ವಿರುದ್ದ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ಅಸೂಯೆಯಿಂದ ಕೂಡಿದ್ದು, ಇದಕ್ಕೆ ಮದ್ದಿಲ್ಲ. ರಾಜ್ಯದ ಬಗ್ಗೆ ಗೌರವ, ಸ್ವಾಭಿಮಾನ ಇದ್ದರೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಹಲಾಲ್ ಬಜೆಟ್ ಎಂದು ಆರೋಪಿಸಿ ಬಿಜೆಪಿಯವರು ನಡೆಸುತ್ತಿರುವ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾವು ಈ ಬಾರಿ 4 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಕೊಟ್ಟಿದ್ದೇವೆ. ಬಡವರ ಬದುಕು ಬದಲಾವಣೆ ಮಾಡಲು 5 ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಬಿಜೆಪಿ ಅವರಿಗೆ ಹೃದಯ ಶ್ರೀಮಂತಿಕೆ ಇಲ್ಲ. ಸಮಾಜವನ್ನು ಒಡೆಯಲು ಹೋಗುತ್ತಿದ್ದಾರೆ. ನಾವು ಹಿಂದುಳಿದವರನ್ನು ಮೇಲಕ್ಕೆ ತರಲು ಪ್ರಯತ್ನಿಸುತ್ತಿದ್ದೇವೆ. ಬಿಜೆಪಿಯವರು ಔಷಧ ತೆಗೆದುಕೊಂಡು ಹೊಟ್ಟೆಹುರಿ ಕಡಿಮೆ ಮಾಡಿಕೊಳ್ಳಲಿ ಎಂದರು.
ಸಿಎಂ ಮತ್ತು ಡಿಸಿಎಂ ಅವರಿಗೆ ಮಲ್ಲಿಕಾರ್ಜುನ ಖರ್ಗೆ ನೀತಿಪಾಠ ವಿಚಾರವಾಗಿ ಮಾತನಾಡಿದ ಅವರು, ಖರ್ಗೆ ಅವರು ಏನೇ ಮಾರ್ಗದರ್ಶನ ಕೊಟ್ಟರೂ ಕೇಳುತ್ತೇವೆ. ವಿರೋಧ ಪಕ್ಷದವರು ಕೂಡ ಒಳ್ಳೆಯ ಮಾರ್ಗದರ್ಶನ ಮಾಡಲಿ. ಟೀಕೆ ಮಾಡಿದರೂ ನಮಗೆ ಬೇಸರವಿಲ್ಲ. ನಾವು ಮಾಡುವ ಕೆಲಸ ಮಾಡುತ್ತೇವೆ. ಜನರು ಇದ್ದಾರೆ ಎಂದು ಹೇಳಿದರು.