ರಾಜಸ್ಥಾನ, ಮಾ.14 (DaijiworldNews/AK): ಯುಪಿಎಸ್ಸಿಯು ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಈ ಕಠಿಣ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಐಎಎಸ್ ಅಧಿಕಾರಿಯಾದ ಹೇಮಂತ್ ಪರೀಕ್ ಅವರ ಯಶೋಗಾಥೆ ಇದು.

ರಾಜಸ್ಥಾನದ ಗ್ರಾಮೀಣ ಕುಟುಂಬದಲ್ಲಿ ಜನಿಸಿದ ಹೇಮಂತ್ ಪರೀಕ್ ಬಡ ಕುಟುಂಬದಲ್ಲಿ ಬೆಳೆದರು. ಅವರ ತಂದೆ ಒಬ್ಬ ರೈತ. ಅವರ ತಾಯಿ ಕುಟುಂಬವನ್ನು ಬೆಂಬಲಿಸಲು ಎಂಎನ್ಆರ್ಇಜಿಎ ಕೆಲಸ ಮಾಡುತ್ತಿದ್ದರು. ಹೇಮಂತ್ ಪರೀಕ್ ರಾಜಸ್ಥಾನದ ಹನುಮಾನ್ಗಢದ ಮಹರ್ಷಿ ದಯಾನಂದ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದರು. ನಂತರ, ಅವರು ಪದವಿ ಅಧ್ಯಯನಕ್ಕಾಗಿ ಕೃಷಿ ಕಾರ್ಯಕ್ರಮಕ್ಕೆ ಸೇರಿದರು.
ಹೇಮಂತ್ ಅವರ ತಂದೆ ಮತ್ತು ಸಹೋದರಿ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರಿಂದ ಜೀವನೋಪಾಯದ ಹೊರೆ ಅವರ ತಾಯಿಯ ಹೆಗಲ ಮೇಲೆ ಬಿತ್ತು. ಪರೀಕ್ ಸ್ವತಃ ಅಂಗವೈಕಲ್ಯವನ್ನು ಎದುರಿಸುತ್ತಿದ್ದರು. ಅವರ ಒಂದು ಕೈ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ನಂತರ, ಕುಟುಂಬವು ಹರಿಯಾಣಕ್ಕೆ ಸ್ಥಳಾಂತರಗೊಂಡಿತು. ಅಲ್ಲಿ ಅವರ ತಾಯಿ ಹಣ ಸಂಪಾದಿಸಲು ಖಾಸಗಿ ಭೂಮಿಯಲ್ಲಿ ಕೆಲಸ ಮಾಡಿದರು.
ಒಮ್ಮೆ, ಗುತ್ತಿಗೆದಾರರೊಬ್ಬರು ಹೇಮಂತ್ ಪರೀಕ್ ಅವರ ತಾಯಿಗೆ 220 ರೂಪಾಯಿಗಳನ್ನು ಪಾವತಿಸಲು ನಿರಾಕರಿಸಿದರು. ಅದರ ಬಗ್ಗೆ ವಿಚಾರಿಸಲು ಹೇಮಂತ್ ಅವರು ಹೋದಾಗ, ಆತ ಅವರನ್ನು ಗೇಲಿ ಮಾಡಿದ್ದ. ಈ ಅವಮಾನದಿಂದಾಗಿ ಹೇಮಂತ್ ಅವರು ಐಎಎಸ್ ಅಧಿಕಾರಿಯಾಗಬೇಕೆಂಬ ದೃಢ ನಿರ್ಧಾರ ಮಾಡುತ್ತಾರೆ.
ಯುಪಿಎಸ್ಸಿ ಪರೀಕ್ಷೆ ಗೆ ತಯಾರಿ ನಡೆಸಲು ಪ್ರಾರಂಭಿಸಿದ ಹೇಮಂತ್ ಅವರು, 2023 ರಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿಯೇ ಉತ್ತೀರ್ಣರಾದರು. ಜೊತೆಗೆ 884 ನೇ ಅಖಿಲ ಭಾರತ ರ್ಯಾಂಕ್ ಗಳಿಸಿದರು.