ಬಾಗಲಕೋಟೆ, ಮಾ.14(DaijiworldNews/TA) : ಸಿದ್ದನಕೊಳ್ಳ ಶಿವಕುಮಾರ ಸ್ವಾಮೀಜಿ ಕಾಲಿಗೆ ಪೊಲೀಸರು ನಮಸ್ಕಾರ ಮಾಡಿ, ಹಣ ಪಡೆದ ವಿಡಿಯೋವೊಂದು ವೈರಲ್ ಆಗಿತ್ತು. ಇದು ಸಾಕಷ್ಟು ಚರ್ಚೆಗೂ ಗ್ರಾಸವಾಗಿ ಟೀಕೆ ಪ್ರಹಾರ ನಡೆದಿತ್ತು. ಈ ಕಾರಣದಿಂದ ಆರು ಜನ ಕಾನ್ಸ್ಟೇಬಲ್ಗಳನ್ನು ವರ್ಗಾವಣೆ ಮಾಡಿ ಬಾಗಲಕೋಟೆ ಎಸ್ಪಿ ಅಮರನಾಥ ರೆಡ್ಡಿ ಆದೇಶ ಹೊರಡಿಸಿದ್ದಾರೆ.

ಎಎಸ್ಐ ಜಿಬಿ ದಳವಾಯಿ ಅವರನ್ನು ಹುನಗುಂದ ಠಾಣೆಗೆ, ಡಿಜೆ ಶಿವಪುರ ಎಎಸ್ಐ ಬಾಗಲಕೋಟೆ ಗ್ರಾಮೀಣ ಠಾಣೆ, ನಾಗರಾಜ ಅಂಕೋಲೆ ಬೀಳಗಿ ಠಾಣೆ, ಜಿಬಿ ಅಂಗಡಿ ಇಳಕಲ್ ನಗರ ಠಾಣೆ, ರಮೇಶ್ ಈಳಗೇರ ಬಾಗಲಕೋಟೆ ಗ್ರಾಮೀಣ ಠಾಣೆ, ರಮೇಶ್ ಹುಲ್ಲೂರು ಜಿಲ್ಲಾ ಪೊಲೀಸ್ ಕಚೇರಿಗೆ ವರ್ಗಾವಣೆ ಮಾಡಲಾಗಿದೆ ಎಂದು ವರದಿಯಾಗಿದೆ.
ವರ್ಗಾವಣೆಯಾದ ಸಿಬ್ಬಂದಿ ಸದ್ಯ ವಾಸವಿರುವ ವಸತಿಗೃಹವನ್ನು ಕೂಡ ತೆರವುಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದೆ. ಸ್ವಾಮೀಜಿಗೆ ನಮಸ್ಕಾರ ಮಾಡಲಿ, ಆದರೆ ಸಮವಸ್ತ್ರದಲ್ಲಿ ನಮಸ್ಕಾರ ಮಾಡುವುದಲ್ಲದೇ ಹಣ ಕೂಡ ಪಡೆದಿದ್ದು ಎಷ್ಟರ ಮಟ್ಟಿಗೆ ಸರಿ ಎಂಬ ಚರ್ಚೆಯ ನಂತರ ಈ ವರ್ಗಾವಣೆ ವಿಚಾರ ಪ್ರಸ್ತಾಪವಾಗಿ ಎಸ್ಪಿ ಆದೇಶ ನೀಡಿದ್ದಾರೆ ಎನ್ನಲಾಗಿದೆ.