ಹಿಮಾಚಲ ಪ್ರದೇಶ, ಮಾ.14(DaijiworldNews/TA) : ಬಿಲಾಸ್ಪುರದಲ್ಲಿ ಮಾಜಿ ಕಾಂಗ್ರೆಸ್ ಶಾಸಕ ಬಂಬೇರ್ ಠಾಕೂರ್ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಹೋಳಿ ಆಚರಣೆಯ ಸಂದರ್ಭದಲ್ಲಿ ಅವರ ನಿವಾಸದ ಮೇಲೆ ನಡೆದ ದಾಳಿಯಲ್ಲಿ ಅವರು ಮತ್ತು ಅವರ ವೈಯಕ್ತಿಕ ಭದ್ರತಾ ಅಧಿಕಾರಿ ಗಾಯಗೊಂಡಿದ್ದಾರೆ. ಮುಖ್ಯ ಮಾರುಕಟ್ಟೆಯ ಕಡೆಗೆ ಪರಾರಿಯಾಗಿರುವ ಆರೋಪಿಗಳನ್ನು ಬಂಧಿಸಲು ಶೋಧ ಕಾರ್ಯ ಆರಂಭಿಸಲಾಗಿದೆ.

ದಾಳಿಕೋರರು ಸುಮಾರು 12 ಸುತ್ತು ಗುಂಡು ಹಾರಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಮಾಜಿ ಶಾಸಕರು ಬಿಲಾಪ್ಸೂರ್ನಲ್ಲಿ ತಮ್ಮ ಪತ್ನಿಗೆ ನೀಡಲಾದ ಸರ್ಕಾರಿ ವಸತಿಗೃಹದ ಅಂಗಳದಲ್ಲಿ ಹೋಳಿ ಆಚರಿಸಲು ಇತರರೊಂದಿಗೆ ಕುಳಿತಿದ್ದಾಗ ನಾಲ್ವರು ಬಂದು ಗುಂಡು ಹಾರಿಸಿದ್ದಾರೆ. ಈ ಸಂದರ್ಭ ಠಾಕೂರ್ ಅವರ ಕಾಲಿಗೆ ಗುಂಡು ತಗುಲಿತು ಎನ್ನಲಾಗಿದೆ.
ಮುಖ್ಯ ಮಾರುಕಟ್ಟೆಯ ಕಡೆಗೆ ಕಾಲ್ನಡಿಗೆಯಲ್ಲಿ ಓಡಿಹೋದ ಆರೋಪಿಗಳನ್ನು ಹಿಡಿಯಲು ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಎಸ್ಪಿ ಬಿಲಾಪ್ಸೂರ್ ಸಂದೀಪ್ ಧವಲ್ ತಿಳಿಸಿದ್ದಾರೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಿ ಸಂಬಂಧಿತ ಕಾನೂನು ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಹೇಳಿದರು. ದಾಳಿಯ ನಂತರ, ಠಾಕೂರ್ ಅವರನ್ನು ಶಿಮ್ಲಾದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು ಮತ್ತು ಪಿಎಸ್ಒ ಅವರನ್ನು ಬಿಲಾಸ್ಪುರದ ಏಮ್ಸ್ಗೆ ಕರೆದೊಯ್ಯಲಾಯಿತು .