ದೆಹಲಿ, ಜೂ15(Daijiworld News/SS): ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿದೆ.
ದೆಹಲಿಯಲ್ಲಿ ನೀತಿ ಆಯೋಗದ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಭಾಗವಹಿಸಲು ಕುಮಾರಸ್ವಾಮಿ ದೆಹಲಿಗೆ ತೆರಳಿದ್ದಾರೆ. ಅತ್ಯಂತ ಪ್ರಮುಖವಾದ ನೀತಿ ಆಯೋಗದ ಸಭೆ ಇದಾಗಿದ್ದು, ಎಲ್ಲ ರಾಜ್ಯದ ಮುಖ್ಯಮಂತ್ರಿಗಳು ಈ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.
ಸಭೆಗೂ ಮುನ್ನಾ ಪ್ರಧಾನಿ ಅವರ ನಿವಾಸದಲ್ಲಿಯೇ ಕುಮಾರಸ್ವಾಮಿ ಅವರು ಮೋದಿ ಅವರನ್ನು ಭೇಟಿ ಆಗಿದ್ದಾರೆ. ನರೇಂದ್ರ ಮೋದಿ ಎರಡನೇ ಅವಧಿಗೆ ಪ್ರಧಾನಿ ಆದ ಬಳಿಕ ಇದೇ ಮೊದಲ ಬಾರಿಗೆ ಕುಮಾರಸ್ವಾಮಿ ಮೋದಿ ಅವರನ್ನು ಭೇಟಿ ಆಗಿದ್ದು, ಈ ವೇಳೆ ರಾಜ್ಯದ ಬರ ಪರಿಸ್ಥಿತಿ, ನರೇಗಾ ಅನುದಾನ ಸೇರಿದಂತೆ ಹಲವು ವಿಷಯಗಳನ್ನು ಕುಮಾರಸ್ವಾಮಿ ಮೋದಿ ಅವರ ಬಳಿ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ಮೋದಿಯವರ ಬಳಿ ರಾಜ್ಯದ ಸಮಸ್ಯೆಗಳ ಬಗ್ಗೆ ಪರಿಹಾರ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ನರೇಗಾ ಯೋಜನೆಯ ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಕೇಂದ್ರ ಸರ್ಕಾರದಲ್ಲಿ ಈಗಾಗಲೇ ಬಾಕಿ ಉಳಿದುಕೊಂಡಿರುವ 1,950 ಕೋಟಿ ರೂ. ಹಣವನ್ನು ರಾಜ್ಯ ಸರ್ಕಾರಕ್ಕೆ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಕುಮಾರಸ್ವಾಮಿ ಕಳೆದ ಬಾರಿ ಮೋದಿ ಅವರನ್ನು ಭೇಟಿ ಆಗಿದ್ದಾಗ ರೇವಣ್ಣ, ದೇವೇಗೌಡ ಜೊತೆಗಿದ್ದರು.