ಶೃಂಗೇರಿ, ಮಾ.21(DaijiworldNews/TA): ಮದ್ಯವ್ಯಸನಿಯ ಅವಾಂತರದಿಂದ ಗುರುವಾರ ರಾತ್ರಿ ಶೃಂಗೇರಿ ಪೊಲೀಸರು ಕಂಗಾಲಾಗಿದ್ದಾರೆ. ಕುಡುಕನ ಕಿರಿಕಿರಿಯಿಂದ ಆಂಬುಲೆನ್ಸ್ ಸಿಬ್ಬಂದಿ ಹಾಗೂ ಪೊಲೀಸರು ರಾತ್ರಿ ಇಡೀ ಪರದಾಟ ಪಟ್ಟಿದ್ದಾರೆ ಎಂದು ಹೇಳಲಾಗಿದೆ. ಹಾಗಿದ್ರೆ ಕುಡುಕ ಮಾಡಿದ್ದೇನು ಎಂಬ ಪ್ರಶ್ನೆ ಮೂಡಬಹುದು. ಹೌದು ಕಂಠಪೂರ್ತಿ ಕುಡಿದ ಕುಡುಕ ಪೊಲೀಸರಿಗೆ ಸವಾಲು ಹಾಕಿದ ಘಟನೆ ಶೃಂಗೇರಿಯಲ್ಲಿ ನಡೆದಿದೆ.

ಹಗರಿಬೊಮ್ಮನಹಳ್ಳಿಯಿಂದ ಕೂಲಿ ಕೆಲಸಕ್ಕಾಗಿ ಶೃಂಗೇರಿಗೆ ಬಂದಿದ್ದ ಮದ್ಯವ್ಯಸನಿ ಬಸವರಾಜ್ ಎಂಬಾತ ಪೊಲೀಸರಿಗೆ ಕರೆ ಮಾಡಿ, ‘ಶೃಂಗೇರಿ ಬಸ್ ನಿಲ್ದಾಣದಲ್ಲಿ ಗುಂಪು ಘರ್ಷಣೆ ಆಗಿದೆ’ ಎಂದು ಹೇಳಿದ್ದಾನೆ. ತದನಂತರ ಅಂಬುಲೆನ್ಸ್ ಸಿಬ್ಬಂದಿಗೆ ಕರೆ ಮಾಡಿ, ‘ಗುಂಪು ಘರ್ಷಣೆಯಲ್ಲಿ ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ತಕ್ಷಣವೇ ಬನ್ನಿ’ ಎಂಬುವುದಾಗಿ ಹೇಳಿದ್ದಾನೆ. ಈತನ ಕರೆಯನ್ನು ಸತ್ಯ ಎಂದು ನಂಬಿದ ಆಂಬುಲೆನ್ಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾದು ಸುಸ್ತಾಗಿದ್ದಾರೆ.
ಒಂದೆಡೆ ಅಂಬುಲೆನ್ಸ್ ನವರ ಪರದಾಟವಾದರೆ ಮತ್ತೊಂದೆಡೆ ಪೊಲೀಸರು ಕೂಡ ಶೃಂಗೇರಿ ಬಸ್ ನಿಲ್ದಾಣಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಆದರೆ ಗುಂಪು ಘರ್ಷಣೆಯ ಯಾವುದೇ ಸುಳಿವು ಕೂಡ ಅವರಿಗೆ ಸಿಗಲಿಲ್ಲ. ಆದುದರಿಂದ ಕರೆ ಮಾಡಿ ತಿಳಿಸಿದ ವ್ಯಕ್ತಿಗೆ ಅವರು ಮತ್ತೆ ಮತ್ತೆ ಕಾಲ್ ಮಾಡಿದ್ದಾರೆ. ಕರೆ ಬಂದ ಕೂಡಲೇ ಮಾತನಾಡಿದ ಕುಡುಕ ಬಸವರಾಜ್, ‘ಭೂಮಿ ಮೇಲೆ ಆಕಾಶದ ಕೆಳಗಿದ್ದೇನೆ. ತಾಕತ್ತಿದ್ದರೆ ನನ್ನನ್ನು ಹುಡುಕಿ’ ಎಂದು ಸವಾಲು ಹಾಕಿದ್ದಾನೆ.
ಈ ಸವಾಲಿನಿಂದ ಕಂಗಾಲಾದ ಮದ್ಯವ್ಯಸನಿಯನ್ನು ಕೊನೆಗೂ ಕಂಡುಹಿಡಿದು ಶೃಂಗೇರಿ ಪೊಲೀಸರು ಬುದ್ಧಿವಾದ ಹೇಳಿ ಬಿಟ್ಟು ಕಳುಹಿಸಿದ್ದಾರೆ ಎಂದು ಹೇಳಲಾಗಿದೆ.