ಬೆಂಗಳೂರು, ಮಾ.24 (DaijiworldNews/AA): ನಂದಿನಿ ಹಾಲಿನ ದರ ಏರಿಕೆ ಸಂಬಂಧ ಇಂದು ಸಿಎಂ ಸಿದ್ದರಾಮಯ್ಯ ಸಭೆ ನಡೆಸಲಿದ್ದು, ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ, ಕೆಎಂಎಫ್ ಅಧ್ಯಕ್ಷರು, ಜಿಲ್ಲಾ ಹಾಲು ಒಕ್ಕೂಟ ಅಧ್ಯಕ್ಷರೊಂದಿಗೆ ಈ ಮಹತ್ವದ ಸಭೆ ನಡೆಯಲಿದೆ. ಪ್ರತಿ ಲೀಟರ್ ಹಾಲಿಗೆ 5 ರೂ. ದರ ಹೆಚ್ಚಿಸಲು ಒಕ್ಕೂಟಗಳು ಈಗಾಗಲೇ ಒತ್ತಾಯಿಸಿದ್ದು, ಈ ಕುರಿತಾಗಿ ಸಿಎಂ ಸಭೆಯಲ್ಲಿ ಚರ್ಚೆ ನಡೆಸಲಿದ್ದಾರೆ. ಸಭೆ ಬಳಿಕ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.
ಪಶು ಆಹಾರ, ಮೇವು, ಕೂಲಿ ಹಾಗೂ ಇತರ ಖರ್ಚು ವಚ್ಚಗಳು ಹೆಚ್ಚಾಗಿದೆ. ಹೀಗಾಗಿ ಪ್ರತಿ ಲೀಟರ್ ಹಾಲಿಗೆ 5 ರೂಪಾಯಿಯಂತೆ ಹೆಚ್ಚಳ ಮಾಡಬೇಕೆಂದು ಕರ್ನಾಟಕದ ಎಲ್ಲ ಹಾಲು ಒಕ್ಕೂಟಗಳ ಅಧ್ಯಕ್ಷರು ಪಶುಸಂಗೋಪನೆ ಸಚಿವ ವೆಂಕಟೇಶ್ಗೆ ಮನವಿ ಮಾಡಿದ್ದರು. ಹೀಗಾಗಿ ಹಾಲಿನ ದರ ಹೆಚ್ಚಳ ಪ್ರಸ್ತಾವ ಸಿದ್ಧಪಡಿಸಲಾಗಿತ್ತು. ಆದರೆ, ಈ ಪ್ರಸ್ತಾವನೆಗೆ ಸರ್ಕಾರದಿಂದ ಅನುಮತಿ ದೊರೆಯಬೇಕಿದೆ ಎಂದು ಹೇಳಲಾಗಿದೆ
ಈ ಸಭೆಯಲ್ಲಿ ಪಶು ಸಂಗೋಪನೆ ಸಚಿವ ವೆಂಕಟೇಶ್, ಸಹಕಾರ ಸಚಿವ ಕೆಎನ್ ರಾಜಣ್ಣ, ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ ಶಿವಸ್ವಾಮಿ, ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರು ಭಾಗಿಯಾಗಲಿದ್ದಾರೆ.