ನವದೆಹಲಿ, ಮಾ.24 (DaijiworldNews/AA): ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ನಿವಾಸದಲ್ಲಿ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಆದೇಶದವರೆಗೆ ತಕ್ಷಣ ಜಾರಿಗೆ ಬರುವಂತೆ ಸಕ್ರಿಯ ಕರ್ತವ್ಯದಿಂದ ತೆಗೆದುಹಾಕಲಾಗಿದೆ ಎಂದು ದೆಹಲಿ ಹೈಕೋರ್ಟ್ ಸೂಚನೆ ನೀಡಿದೆ.

ನ್ಯಾ. ಯಶವಂತ್ ವರ್ಮಾ ನ್ಯಾಯಾಂಗ ಕರ್ತವ್ಯಗಳನ್ನು ನಿರ್ವಹಿಸದಂತೆ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ತಿಳಿಸಿದ್ದು, ನ್ಯಾ. ಯಶವಂತ್ ವರ್ಮಾ ಅವರ ನ್ಯಾಯಾಂಗ ಕೆಲಸವನ್ನು ಹಿಂತೆಗೆದುಕೊಂಡಿದೆ. ದೆಹಲಿ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ನಿವಾಸದ ಆವರಣದಲ್ಲಿರುವ ಔಟ್ಹೌಸ್ನಲ್ಲಿ ಲೆಕ್ಕವಿಲ್ಲದ ಭಾರೀ ಪ್ರಮಾಣದ ಹಣ ಪತ್ತೆಯಾಗಿದೆ ಎಂಬ ಆರೋಪದ ಹಿನ್ನೆಲೆ ಈ ಆದೇಶ ಹೊರಡಿಸಲಾಗಿದೆ.
ಈ ಕುರಿತು ದೆಹಲಿ ಹೈಕೋರ್ಟ್ನ ಅಧಿಕೃತ ವೆಬ್ಸೈಟ್ನಲ್ಲಿ ನೋಟಿಸ್ ಪ್ರಕಟಿಸಲಾಗಿದ್ದು, "ಇತ್ತೀಚಿನ ಘಟನೆಗಳ ಹಿನ್ನೆಲೆಯಲ್ಲಿ, ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ನ್ಯಾಯಾಂಗ ಕೆಲಸವನ್ನು ತಕ್ಷಣದಿಂದ ಜಾರಿಗೆ ಬರುವಂತೆ, ಮುಂದಿನ ಆದೇಶದವರೆಗೆ ಹಿಂಪಡೆಯಲಾಗಿದೆ" ಎಂದು ತಿಳಿಸಲಾಗಿದೆ.
ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧದ ಆರೋಪಗಳ ತನಿಖೆಗಾಗಿ ಸುಪ್ರೀಂ ಕೋರ್ಟ್ ಮೂವರು ಸದಸ್ಯರ ಸಮಿತಿಯನ್ನು ರಚಿಸಿದೆ. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ಶೀಲ್ ನಾಗು, ಹಿಮಾಚಲ ಪ್ರದೇಶದ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ಜಿಎಸ್ ಸಂಧವಾಲಿಯಾ ಮತ್ತು ಕರ್ನಾಟಕ ಹೈಕೋರ್ಟ್ನ ನ್ಯಾಯಾಧೀಶರಾದ ನ್ಯಾಯಮೂರ್ತಿ ಅನು ಶಿವರಾಮನ್ ಈ ಸಮಿತಿಯ ಸದಸ್ಯರಾಗಿದ್ದಾರೆ.