ಬೆಂಗಳೂರು,ಮಾ.2 (DaijiworldNews/AK): ಬೆಸ್ಕಾಂ ಮತ್ತು ಇತರ ಎಸ್ಕಾಂಗಳ ಸ್ಮಾರ್ಟ್ ಮೀಟರ್ ಟೆಂಡರ್ನಲ್ಲಿ ಸುಮಾರು 15,568 ಕೋಟಿ ರೂಪಾಯಿಯ ಬೃಹತ್ ಪ್ರಮಾಣದ ಅವ್ಯವಹಾರ ನಡೆದಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಅವರು ಆರೋಪಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಈ ಅವ್ಯವಹಾರದ ಗಾತ್ರ ಇನ್ನೂ ದೊಡ್ಡದೇ ಇದೆ ಎಂದು ದೂರಿದರು. ಎಸ್ಕಾಂಗಳು ಕೆಇಆರ್ಸಿ ನಿಯಮಗಳಿಗೆ ಬದ್ಧವಾಗಿರಬೇಕು. ಕೆಇಆರ್ಸಿ ನಿಯಮಗಳಲ್ಲಿ ಸ್ಮಾರ್ಟ್ ಮೀಟರ್ ಕಡ್ಡಾಯ ಎಂದು ಎಲ್ಲೂ ಹೇಳಿಲ್ಲ ಎಂದು ವಿವರಿಸಿದರು.
ತಾತ್ಕಾಲಿಕ ಸಂಪರ್ಕಕ್ಕೆ ಮಾತ್ರ ಸ್ಮಾರ್ಟ್ ಮೀಟರ್ ಕಡ್ಡಾಯ ಮಾಡಬಹುದೇ ಹೊರತು ಖಾಯಂ ಗ್ರಾಹಕರು, ಹೊಸ ಗ್ರಾಹಕರಿಗೆ ಈ ಸ್ಮಾರ್ಟ್ ಮೀಟರನ್ನು ಕಡ್ಡಾಯ ಮಾಡುವಂತಿಲ್ಲ ಎಂದರು. ಪವರ್ ಪಾಯಿಂಟ್ ಪ್ರದರ್ಶನವನ್ನೂ ನೀಡಿದರು.
ಸೆಂಟ್ರಲ್ ಇಲೆಕ್ಟ್ರಿಸಿಟಿ ಅಥಾರಿಟಿ ನಿಯಮಾವಳಿ ಪ್ರಕಾರವೂ ಸ್ಮಾರ್ಟ್ ಮೀಟರ್ ಕಡ್ಡಾಯವಲ್ಲ ಎಂದು ತಿಳಿಸಿದರು. ಕೆಟಿಪಿಪಿ ಕಾಯ್ದೆಯಡಿ ಬಿಡ್ ಕೆಪ್ಯಾಸಿಟಿಯನ್ನು ಟೆಂಡರ್ನಲ್ಲಿ ತಿಳಿಸಿಲ್ಲ. ಅದು 6,800 ಕೋಟಿ ಇರಬೇಕಿತ್ತು. ಬಿಡ್ಡಿಂಗ್ ಸಾಮಥ್ರ್ಯ ಇಲ್ಲದಿರುವುದೇ ಮೊದಲ ಹಗರಣ ಎಂದು ಆಕ್ಷೇಪಿಸಿದರು.
ಕೆಟಿಪಿಪಿ ಕಾಯ್ದೆ ಪ್ರಕಾರ ವ್ಯವಹಾರವು 1,920 ಕೋಟಿ ಇರಬೇಕಾಗಿತ್ತು. ಟೆಂಡರ್ನಲ್ಲಿ ಬರೀ 107 ಕೋಟಿ ಎಂದು ನಮೂದಿಸಿದ್ದಾರೆ. ಬ್ಲ್ಯಾಕ್ಲಿಸ್ಟ್ ಆದ ಕಂಪೆನಿಗೆ ಕೊಡುವುದಕ್ಕೆ ಅವಕಾಶ ಇಲ್ಲ ಎಂದು ತಿಳಿಸಿದ್ದರೂ ಉತ್ತರ ಪ್ರದೇಶದಲ್ಲಿ ಬ್ಲ್ಯಾಕ್ ಲಿಸ್ಟ್ ಆದ ಬಿಸಿಐಟಿಎಸ್ ಅನ್ನು ಪರಿಗಣಿಸಿದ್ದಾರೆ ಎಂದು ದೂರಿದರು. ಈ ಯೋಜನೆಯ ಅಂದಾಜು ವೆಚ್ಚ 571 ಕೋಟಿ ಎಂದು ತಿಳಿಸಿ ನಂತರ ತಿದ್ದುಪಡಿ ಮಾಡಿದ್ದಾರೆ. ಟೆಂಡರ್ನ ಒಟ್ಟು ಮೊತ್ತ ತಿಳಿಸದೇ ಟೆಂಡರ್ ಕರೆಯಲಾಗಿದೆ ಎಂದು ಟೀಕಿಸಿದರು.
ಕೆಟಿಪಿಪಿ ಕಾಯ್ದೆಯೂ ಇಲ್ಲ; ಕೇಂದ್ರ ಸರಕಾರದ ನಿಯಮಾವಳಿಯನ್ನೂ ಜಾರಿ ಮಾಡಿಲ್ಲ; ಸ್ಮಾರ್ಟ್ ಮೀಟರ್ ತಯಾರಿಸದ, ಅಳವಡಿಸದ, ಡಿಜಿಟಲ್ ಮೀಟರ್ ಅಳವಡಿಸಿದ ವ್ಯಕ್ತಿಯನ್ನು ಪರಿಗಣಿಸಿದ್ದಾರೆ. ಪ್ರಿಬಿಡ್ನಲ್ಲಿ ರಾಜಶ್ರೀ ಯಾಕೆ ಬಂದಿಲ್ಲ ಎಂದು ಪ್ರಶ್ನಿಸಿದರು. ಮೈಸೂರಿನಲ್ಲಿ ಗರಿಷ್ಠ ಸ್ಮಾರ್ಟ್ ಮೀಟರ್ ತಯಾರಾಗುತ್ತದೆ. ಅರ್ಹರನ್ನು ಹೊರಗಿಟ್ಟು ಬರೀ ಫೋನ್ ತಯಾರಕರನ್ನು ಆಯ್ಕೆ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.
ಕೇಂದ್ರ ಸರಕಾರದ ನಿಯಮಗಳ ಪ್ರಕಾರ 1 ಲಕ್ಷ ಸ್ಮಾರ್ಟ್ ಮೀಟರ್ ಅಳವಡಿಸಿದ ಅನುಭವ ಇರಬೇಕು. ಅದನ್ನು ಬಿಟ್ಟು ಉತ್ಪಾದನೆಯೇ ಮಾಡದ 10 ಲಕ್ಷ ಸಾಮಾನ್ಯ ಮೀಟರ್ ಅಳವಡಿಕೆಯನ್ನೇ ಮಾನದಂಡ ಮಾಡಿದ್ದಾರೆ. ಮೊದಲು ಟ್ರಾನ್ಸ್ಫಾರ್ಮರ್, ಫೀಡರ್ಗಳಿಗೆ ಇದನ್ನು ಅಳವಡಿಸಿ ಸಾಗಾಟದಲ್ಲಿ ಆಗುವ ನಷ್ಟವನ್ನು ತಿಳಿಯಬೇಕಿತ್ತು. ಬಳಿಕ ರಾಜ್ಯದ ಗ್ರಾಹಕರಿಗೆ ಇದನ್ನು ಅಳವಡಿಸಬೇಕಿತ್ತು. ಕೇಂದ್ರದ ಆರ್ಡಿಎಸ್ಎಸ್ ಅಡಿ ಸಿಗುವ 3 ಸಾವಿರ ಕೋಟಿಯನ್ನು ಬಳಸಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಆಳ್ವಿಕೆಯ ಹಿಮಾಚಲ ಪ್ರದೇಶದಲ್ಲಿ, ತೆಲಂಗಾಣ, ಕೇರಳದಲ್ಲಿ ಕಡಿಮೆ ಮೊತ್ತಕ್ಕೆ ಸ್ಮಾರ್ಟ್ ಮೀಟರ್ ಅಳವಡಿಸಿದ್ದಾರೆ. ನಮ್ಮ ರಾಜ್ಯದಲ್ಲಿ ಒಂದೊಂದು ಮೀಟರ್ಗೆ 17 ಸಾವಿರ ಆಗುತ್ತದೆ. ಅದೇ ಬೇರೆ ರಾಜ್ಯದಲ್ಲಿ ಪ್ರತಿ ಮೀಟರ್ಗೆ 7,740 ರೂ. ಆಗಲಿದೆ. ಬೆಸ್ಕಾಂ ಮತ್ತಿತರ ಎಸ್ಕಾಂಗೆ ಹೋಲಿಸಿದರೆ ಇದು 9,260 ರೂ. ಹೆಚ್ಚು ಎಂದು ತಿಳಿಸಿದರು.