ಬೆಂಗಳೂರು,ಮಾ.2 (DaijiworldNews/AK): ಬಾಬಾಸಾಹೇಬ್ ಡಾ.ಅಂಬೇಡ್ಕರ್ ಮತ್ತು ದೇಶದ ಸಂವಿಧಾನವನ್ನು ವಿರೋಧಿಸುವುದು ಕಾಂಗ್ರೆಸ್ಸಿನ ಡಿ.ಎನ್.ಎ ಎಂದು ಮಾಜಿ ಸಚಿವ ಮತ್ತು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಟೀಕಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಕಾಂಗ್ರೆಸ್ಸಿನ ಡಿ.ಎನ್.ಎಯು ಸಂವಿಧಾನ ವಿರೋಧಿ ಮಾನಸಿಕತೆ ಹೊಂದಿದೆ. 370ನೇ ವಿಧಿಯನ್ನು ಡಾ. ಅಂಬೇಡ್ಕರರು ವಿರೋಧಿಸಿದ್ದರು. ನೆಹರೂ ಇದೇ ವಿಧಿಯನ್ನು ಜಾರಿಗೊಳಿಸಿದರು. ಸಂವಿಧಾನದಲ್ಲಿ ಡಾ. ಅಂಬೇಡ್ಕರರು ಸೇರಿಸಿದ್ದ ಸಮಾನ ನಾಗರಿಕ ಸಂಹಿತೆಯನ್ನು ಇವತ್ತಿನವರೆಗೂ ಅವರು ಅದನ್ನು ಅನುಷ್ಠಾನಕ್ಕೆ ತಂದಿಲ್ಲ; ಬಿಜೆಪಿ ಅದನ್ನು ಅನುಷ್ಠಾನಕ್ಕೆ ತರುವುದಾಗಿ ಮುಂದಾದರೆ ವಿರೋಧಿಸುತ್ತಾರೆ ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ಸಿನ ಡಿಎನ್ಎ ಮುಂದುವರೆದ ಭಾಗವಾಗಿ ಡಿ.ಕೆ.ಶಿವಕುಮಾರರು ಟಿ.ವಿ. ಸಂದರ್ಶನದಲ್ಲಿ ಸಂವಿಧಾನ ಬದಲಿಸುವ ಮಾತನಾಡಿದ್ದಾರೆ ಎಂದು ತಿಳಿಸಿದರು.ಕಾಂಗ್ರೆಸ್ಸನ್ನು ಕಿತ್ತೊಗೆದು ನಾವು ಸಂವಿಧಾನ ಉಳಿಸಿಕೊಳ್ಳುತ್ತೇವೆ ಎಂದು ಅವರು ಸವಾಲು ಹಾಕಿದರು. ಮತೀಯ ಆಧಾರಿತ ಶೇ 4 ಮೀಸಲಾತಿಯೇ ಸಂವಿಧಾನಕ್ಕೆ ವಿರುದ್ಧವಾದುದು. ಆ ನಿಲುವನ್ನು ಯಾವಾಗ ಇವರ ಸಚಿವಸಂಪುಟ ಅನುಮೋದಿಸಿತೋ, ಕಾಂಗ್ರೆಸ್ಸಿಗೆ ಬಹುಮತ ಇದೆ ಎಂದು ಯಾವಾಗ ಅದನ್ನು ಬೆಂಬಲಿಸಿದರೋ ಆಗಲೇ ಇವರ ನಿಲುವೇನೆಂದು ಗೊತ್ತಾಗಿದೆ. ಸಂವಿಧಾನವನ್ನು ಬದಲಿಸಿ ಆದರೂ ಮತೀಯ ಆಧಾರಿತ ಮೀಸಲಾತಿ ಕೊಡುವುದೇ ಇವರ ನಿಲುವೆಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.