ಬೆಂಗಳೂರು, ಮಾ.27 (DaijiworldNews/AK):ಬಸನಗೌಡ ಪಾಟೀಲ್ ಯತ್ನಾಳ್ ಅವರ ಉಚ್ಚಾಟನೆಯಿಂದ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಆಗಲಾರದು ಎಂದು ಬಿಜೆಪಿ ರಾಜ್ಯ ಮುಖ್ಯವಕ್ತಾರ ಅಶ್ವತ್ಥನಾರಾಯಣ್ ಅವರು ಅಭಿಪ್ರಾಯಪಟ್ಟರು.

ಮಾಧ್ಯಮಗಳೊಂದಿಗೆ ಇಂದು ಮಾತನಾಡಿದ ಅವರು ಪ್ರಶ್ನೆಗಳಿಗೆ ಉತ್ತರ ನೀಡಿದರು. ಪ್ರಲ್ಹಾದ್ ಜೋಶಿಯವರು ಅಧ್ಯಕ್ಷರಾಗಿದ್ದಾಗ ಹಿಂದೆ ಅವರನ್ನು ಉಚ್ಚಾಟಿಸಲಾಗಿತ್ತು. ಯಡಿಯೂರಪ್ಪನವರು ಅದನ್ನು ರದ್ದು ಮಾಡಿ ಪಕ್ಷಕ್ಕೆ ಸೇರಿಸಿಕೊಂಡಿದ್ದರೂ ಅವರ ವರ್ತನೆಯಲ್ಲಿ ಸುಧಾರಣೆ ಆಗಲಿಲ್ಲ ಎಂದು ನುಡಿದರು.
ಕಳೆದ ಒಂದೂವರೆ ವರ್ಷದಿಂದ ಬಿಜೆಪಿ ಶಾಸಕರಾಗಿರುವ, ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪಕ್ಷದ ನಾಯಕರ ವಿರುದ್ಧವಾಗಿ ಅಶಿಸ್ತಿನಿಂದ ವರ್ತಿಸಿದ್ದರು. ಅವರ ವಿರುದ್ಧ ಹೇಳಿಕೆ ನೀಡಿದ್ದಲ್ಲದೇ, ಪಕ್ಷಕ್ಕೆ ಮುಜುಗರ ಆಗುವಂತೆ ಹೇಳಿಕೆ ಬಿಡುಗಡೆ ಮಾಡಿದ್ದರು. ಸುಮಾರು ವರ್ಷಗಳಿಂದ ಇದು ನಡೆದಿತ್ತು ಎಂದು ವಿವರಿಸಿದರು.
ಅಟಲ್ ಬಿಹಾರಿ ವಾಜಪೇಯಿ ಮತ್ತು ಅಡ್ವಾಣಿ ಅವರ ವಿರುದ್ಧವಾಗಿ, ಕರ್ನಾಟಕದಲ್ಲಿ ಯಡಿಯೂರಪ್ಪ, ಪ್ರಲ್ಹಾದ್ ಜೋಶಿ, ಜಗದೀಶ್ ಶೆಟ್ಟರ್ ಅವರ ವಿರುದ್ಧವಾಗಿ ಪಕ್ಷಕ್ಕೆ ಮುಜುಗರ ಆಗುವ ರೀತಿಯಲ್ಲಿ ವರ್ತಿಸಿದ್ದರು ಎಂದರು.
ಕೇಂದ್ರ ಶಿಸ್ತು ಸಮಿತಿ ಮೂರು ಬಾರಿ ಅವರಿಗೆ ನೋಟಿಸ್ ಕೊಟ್ಟಿತ್ತು. ಅವರು ಸುಧಾರಣೆ ಮಾಡಿಕೊಂಡು ತಪ್ಪನ್ನು ತಿದ್ದಿಕೊಳ್ಳುವ ನಿರೀಕ್ಷೆ ಇಡಲಾಗಿತ್ತು. ತಪ್ಪನ್ನು ಅವರು ತಿದ್ದಿಕೊಂಡಿಲ್ಲ. ಕೇಂದ್ರ ಶಿಸ್ತು ಸಮಿತಿಯು ಯತ್ನಾಳರನ್ನು ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿದೆ. ಇದು ಕೇಂದ್ರ ಶಿಸ್ತು ಸಮಿತಿ ಮತ್ತು ಪಕ್ಷದ ತೀರ್ಮಾನ. ಇದು ಎರಡನೇ ಬಾರಿ ಅವರನ್ನು ಉಚ್ಚಾಟನೆ ಮಾಡಿದ ಘಟನೆ ಎಂದು ತಿಳಿಸಿದರು.
ನಮ್ಮ ಅಭ್ಯರ್ಥಿ ವಿರುದ್ಧ ಅವರು ಎಂಎಲ್ಸಿ ಸ್ಥಾನಕ್ಕೆ ಸ್ಪರ್ಧಿಸಿ ಎಂಎಲ್ಸಿ ಆಗಿದ್ದರು. ಆದರೂ ಯಡಿಯೂರಪ್ಪನವರು ಉಚ್ಚಾಟನೆ ರದ್ದು ಮಾಡಿ ಎಂಎಲ್ಎ ಟಿಕೆಟ್ ಕೊಟ್ಟಿದ್ದರು. ಅವರು ಸುಧಾರಣೆ ಆಗಲಿಲ್ಲ; ಟೀಕೆ ಮಾಡುತ್ತ ಬಂದರು. ಪಕ್ಷ ಇವರ ಹೇಳಿಕೆ, ನಡವಳಿಕೆಯನ್ನು ಗಂಭೀರವಾಗಿ ಪರಿಣಿಸಿ ಉಚ್ಚಾಟನೆ ಮಾಡಿದೆ ಎಂದು ವಿವರಿಸಿದರು.
ಪಕ್ಷದ ತೀರ್ಮಾನವನ್ನು ರಾಜ್ಯ ಬಿಜೆಪಿ ಸ್ವಾಗತಿಸುತ್ತದೆ. ಪಕ್ಷದ ವಿರುದ್ಧ ಅಶಿಸ್ತಿನಿಂದ ನಡೆದುಕೊಳ್ಳುವವರಿಗೆ ಇದೊಂದು ಎಚ್ಚರಿಕೆಯ ಮಾತು ಎಂದು ತಿಳಿದುಕೊಳ್ಳಬೇಕಿದೆ ಎಂದು ತಿಳಿಸಿದರು.