ಸುಕ್ಮಾ, ಮಾ.29 (DaijiworldNews/AA): ಭದ್ರತಾ ಸಿಬ್ಬಂದಿ ಮತ್ತು ನಕ್ಸಲರ ನಡುವೆ ನಡೆದ ಎನ್ಕೌಂಟರ್ನಲ್ಲಿ 16 ನಕ್ಸಲರು ಸಾವನ್ನಪ್ಪಿರುವ ಘಟನೆ ಛತ್ತೀಸ್ಗಢದ ಸುಕ್ಮಾ ಜಿಲ್ಲೆಯಲ್ಲಿ ಇಂದು ಸಂಭವಿಸಿದೆ.

ಕೆರ್ಲಾಪಾಲ್ ಪೊಲೀಸ್ ಠಾಣೆ ಪ್ರದೇಶದ ಅರಣ್ಯದಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಅಲ್ಲಿ ನಕ್ಸಲ ವಿರೋಧಿ ಕಾರ್ಯಾಚರಣೆಗೆ ಭದ್ರತಾ ಪಡೆಗಳ ಜಂಟಿ ತಂಡ ಹೊರಟಿತ್ತು. ಈ ವೇಳೆ ಭದ್ರತಾ ಸಿಬ್ಬಂದಿ ಮತ್ತು ನಕ್ಸಲರ ನಡುವೆ ಗುಂಡಿನ ಕಾಳಗ ನಡೆದಿದೆ ಎಂದು ಬಸ್ತಾರ್ ಐಜಿ ಸುಂದರರಾಜ್ ಪಿ ಮಾಹಿತಿ ನೀಡಿದ್ದಾರೆ.
ಕೆರ್ಲಾಪಾಲ್ ಪ್ರದೇಶದಲ್ಲಿ ಮಾವೋವಾದಿಗಳು ಬಿಡುಬಿಟ್ಟಿದ್ದರು ಎನ್ನಲಾಗಿತ್ತು. ಈ ಮಾಹಿತಿಯ ಆಧಾರದ ಮೇಲೆ ಮಾರ್ಚ್ 28ರ ರಾತ್ರಿ ಭದ್ರತಾ ಸಿಬ್ಬಂದಿ ಕಾರ್ಯಚರಣೆ ನಡೆಸಿದ್ದಾರೆ. ಈ ಕಾರ್ಯಚರಣೆಯಲ್ಲಿ ಜಿಲ್ಲಾ ಮೀಸಲು ಪಡೆ (ಡಿಆರ್ಜಿ) ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಸಿಬ್ಬಂದಿ ಭಾಗಿಯಾಗಿದ್ದಾರೆ.
ಎನ್ಕೌಂಟರ್ ನಡೆದ ಸ್ಥಳದಿಂದ ಈವರೆಗೆ 16 ನಕ್ಸಲರ ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆ ಇನ್ನೂ ಮುಂದುವರೆದಿದೆ. ಕಾರ್ಯಾಚರಣೆಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸುಕ್ಮಾ ಪೊಲೀಸ್ ಠಾಣೆ ವ್ಯಾಪ್ತಿಯ ಕೆರ್ಲಪಾಲ್ ಪ್ರದೇಶದಲ್ಲಿ ನಕ್ಸಲರ ಇರುವ ಬಗ್ಗೆ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತ್ತು. ಜಂಟಿ ತಂಡವು ಮಾರ್ಚ್ 28 ರಂದು ಶೋಧ ಕಾರ್ಯಾಚರಣೆಗೆ ತೆರಳಿದ್ದು, ಇಂದು ಬೆಳಗಿನ ಜಾವದಿಂದ ನಿರಂತರ ಗುಂಡಿನ ದಾಳಿ ಮುಂದುವರೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭದ್ರತಾ ಪಡೆಗಳು ಪ್ರಸ್ತುತ ಎನ್ಕೌಂಟರ್ ಸ್ಥಳ ಮತ್ತು ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ತೀವ್ರ ಶೋಧ ನಡೆಸುತ್ತಿವೆ. ನಡೆಯುತ್ತಿರುವ ಕಾರ್ಯಾಚರಣೆ ಪೂರ್ಣಗೊಂಡ ನಂತರ ವಿವರವಾದ ಹೇಳಿಕೆಯನ್ನು ನೀಡಲಾಗುವುದು ಎಂದು ಅವರು ಹೇಳಿದ್ದಾರೆ.