ನವದೆಹಲಿ, ಏ.01 (DaijiworldNews/AA): ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಹೈದರಾಬಾದ್ ಭವನದಲ್ಲಿಂದು ಚಿಲಿ ಅಧ್ಯಕ್ಷ ಗೆಬ್ರಿಯಲ್ ಬೋರಿಕ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ದ್ವಿಪಕ್ಷೀಯ ಮಾತುಕತೆ ಪ್ರಗತಿಯಲ್ಲಿದು, ರಕ್ಷಣೆ, ಸಹಕಾರ, ತಂತ್ರಜ್ಞಾನ, ಬಾಂಧವ್ಯದ ಕುರಿತು ಉಭಯ ದೇಶಗಳ ನಾಯಕರುಗಳು ಚರ್ಚೆ ನಡೆಸಿದರು ಎನ್ನಲಾಗಿದೆ. ಸಭೆಯಲ್ಲಿ ಸಚಿವರಾದ ಡಾ. ಎಸ್. ಜೈಶಂಕರ್, ಪಿಯೂಶ್ ಗೋಯಲ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದಾರೆ.
5 ದಿನಗಳ ಭಾರತ ಅಧಿಕೃತ ಭೇಟಿಗಾಗಿ ಆಗಮಿಸಿರುವ ಚಿಲಿ ಅಧ್ಯಕ್ಷ ಗೆಬ್ರಿಯಲ್ ಬೋರಿಕ್ ದೆಹಲಿಯ ರಾಜ್ ಘಾಟ್ ನಲ್ಲಿರುವ ಮಹಾತ್ಮಾ ಗಾಂಧೀಜಿ ಅವರ ಸಮಾಧಿ ಸ್ಥಳಕ್ಕೆ ತೆರಳಿ ನಮನ ಸಲ್ಲಿಸಿದರು. ಬೆಳಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್. ಜೈಶಂಕರ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ವೇಳೆ ಅವರು, ಹಲವು ವಲಯಗಳಲ್ಲಿ ಸಂಬಂಧ ವೃದ್ಧಿಯ ಬಗ್ಗೆ ಸಮಾಲೋಚಿಸಿದರು.
ಚಿಲಿ ಅಧ್ಯಕ್ಷರೊಂದಿಗೆ ಅಲ್ಲಿನ ಸಚಿವರು, ಸಂಸದರು, ಉದ್ಯಮಿಗಳು ಸೇರಿದಂತೆ ಉನ್ನತ ಮಟ್ಟದ ವಾಣಿಜ್ಯ ನಿಯೋಗವೂ ಆಗಮಿಸಿದೆ. ಇದೇ ಮೊದಲ ಬಾರಿಗೆ ಅಧ್ಯಕ್ಷ ಬೋರಿಕ್ ಅವರು ಭಾರತ ಪ್ರವಾಸವನ್ನು ಕೈಗೊಂಡಿದ್ದು, ಇದರಿಂದ ಭಾರತ-ಚಿಲಿ ನಡುವಿನ ವಾಣಿಜ್ಯ ಹಾಗೂ ಸಾಂಸ್ಕೃತಿಕ ಸಂಬಂಧ ಮತ್ತಷ್ಟು ಬಲವರ್ಧನೆಯಾಗುತ್ತಿದೆ ಎಂದು ನಿರೀಕ್ಷಿಸಲಾಗಿದೆ.
ಇಂದು ಸಂಜೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಚಿಲಿ ಅಧ್ಯಕ್ಷರಿಗೆ ವಿಶೇಷ ಔತಣಕೂಟ ಆಯೋಜಿಸಿದ್ದಾರೆ. ಇದಕ್ಕೂ ಮುನ್ನ ಇಂದು ಬೆಳಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವ ಪಬಿತ್ರಾ ಮಾರ್ಗರಿಟಾ ಅವರು ಚಿಲಿ ಅದ್ಯಕ್ಷರನ್ನು ಸ್ವಾಗತಿಸಿದರು.
ನಂತರ, ಅವರಿಗೆ ಸಾಂಪ್ರದಾಯಿಕ ರೀತಿಯಲ್ಲಿ ಸ್ವಾಗತವನ್ನು ಕೋರಲಾಯಿತು. ಅಧ್ಯಕ್ಷ ಬೋರಿಕ್ ಅವರು ಏಪ್ರಿಲ್ ೫ರ ವರೆಗೆ ಭಾರತ ಪ್ರವಾಸದಲ್ಲಿದ್ದು, ಆಗ್ರಾ, ಮುಂಬೈ ಹಾಗೂ ಬೆಂಗಳೂರಿಗೆ ಭೇಟಿ ನೀಡುವ ಕಾರ್ಯಕ್ರಮವಿದೆ