ನವದೆಹಲಿ, ಏ.02 (DaijiworldNews/AK):ವಕ್ಫ್ ಆಸ್ತಿಯನ್ನು ತಪ್ಪಾಗಿ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದು ವಕ್ಫ್ ಬೋರ್ಡ್ ಮತ್ತು ವಕ್ಫ್ ಕೌನ್ಸಿಲ್ನ ಕೆಲಸ. ಹಾಗಾಗಿ ವಕ್ಫ್ ಕಾನೂನು ಅಡಿಯಲ್ಲಿ ಯಾರಾದ್ರೂ ದಾನ ಮಾಡಿದ ಆಸ್ತಿಯ ಆಡಳಿತವನ್ನು ಮಾತ್ರ ಮುಸ್ಲಿಮೇತರ ಸದಸ್ಯರು ನೋಡಿಕೊಳ್ತಾರೆ. ಇನ್ನುಳಿದಂತೆ ಧಾರ್ಮಿಕ ವ್ಯವಹಾರ ನಿರ್ವಹಣೆ ಮಾಡುವಲ್ಲಿ ಮುಸ್ಲಿಮೇತರ ಸದಸ್ಯರು ಯಾವುದೇ ಪಾತ್ರ ನಿರ್ವಹಿಸಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಪ್ರಶ್ನೋತ್ತರ ಕಲಾಪದ ವೇಳೆ ವಕ್ಫ್ ಬಿಲ್ ಮಂಡನೆಗೆ ಬಗ್ಗೆ ತಡವಾಗಿ ಸಂಸದರಿಗೆ ಮಾಹಿತಿ ಬಂದಿದೆ, ಸಂಸದರಿಗೂ ಅವಕಾಶ ನೀಡಬೇಕು, ತಿದ್ದುಪಡಿ ಪ್ರತಿಯನ್ನು ಅಧ್ಯಯನಕ್ಕೆ ಸರಿಯಾಗಿ ನೀಡಿಲ್ಲ. ನಾವು ಚರ್ಚೆ ಮಾಡಲು ಹೇಗೆ ಸಾಧ್ಯ? ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಕೆ.ಸಿ ವೇಣುಗೋಪಾಲ್ ಪ್ರಶ್ನೆ ಮಾಡಿದರು.
ಇದಕ್ಕೆ ಉತ್ತರಿಸಿದ ಅಮಿತ್ ಶಾ, ವಿಪಕ್ಷಗಳ ಆಗ್ರಹದ ಮೇರೆಗೆ ವಕ್ಫ್ ತಿದ್ದುಪಡಿ ಮಸೂದೆಯನ್ನ ಜೆಪಿಸಿಗೆ ಕಳುಹಿಸಲಾಗಿತ್ತು. ಈಗ ಅಲ್ಲಿಂದ ಬಂದ ಬಳಿಕ ಸಚಿವ ಸಂಪುಟದ ಅನುಮೋದನೆ ಪಡೆದು ಈಗ ಬಿಲ್ ಮಂಡಿಸಿದೆ. ಕಾಂಗ್ರೆಸ್ ಅವಧಿಯ ರೀತಿಯಲ್ಲಿ ಜೆಪಿಸಿ ಕೆಲಸ ಮಾಡಲ್ಲ, ವ್ಯವಸ್ಥಿತ ಚರ್ಚೆಯ ಮೂಲಕ ಪರಿಶೀಲನೆಗೆ ಒಳಪಟ್ಟಿದೆ ಎಂದು ಉತ್ತರಿಸಿದರು.
ನಂತರ ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಚರ್ಚೆ ವೇಳೆ ಮಾಣಿಪ್ಪಾಡಿ ವರದಿ ಉಲ್ಲೇಖಿಸಿದ ಅಮಿತ್ ಶಾ, . 29,000 ಎಕರೆ ವಕ್ಫ್ ಆಸ್ತಿಯನ್ನ ದೇಶದ ಕೆಲಸಗಳಿಗೆ ಬಾಡಿಗೆ ನೀಡಲಾಗಿದೆ ಅಂತಿದ್ದಾರೆ. ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ 15,000 ಎಕರೆಯನ್ನ ವಕ್ಫ್ ಆಸ್ತಿ ಎಂದು ಘೋಷಿಸಿ ವಿವಾದ ಮಾಡಲಾಯ್ತು. ಈ ವಿವಾದಿತ ಭೂಮಿ 5,000 ಕೋಟಿ ಬೆಲೆ ಬಾಳುತ್ತದೆ. ಎಕ್ರೆಗೆ 12,000 ರೂಪಾಯಿಯಂತೆ ಬಾಡಿಗೆ ನೀಡಲಾಗಿದೆ. ಆದ್ರೆ ಇದರ ಲೆಕ್ಕಾಚಾರ ಮಾಡ್ಬೇಡಿ, ಪರಿಶೀಲನೆ ಮಾಡಬೇಡಿ ಎಂದು ಹೇಳುತ್ತಾರೆ. ಈ ಹಣ ದೇಶದ ಬಡ ಮುಸ್ಲಿಮರದ್ದು, ಈ ಹಣ ಕಳ್ಳತನ ಮಾಡಲಿಕ್ಕೆ ಇರೋದಲ್ಲ ಅಂತ ಹೇಳಿದ್ದಾರೆ.
ಇನ್ನೂ ವಕ್ಫ್ ಮಸೂದೆಯ ಬಗ್ಗೆ ವಿಪಕ್ಷ ನಾಯಕರು ತಪ್ಪು ಕಲ್ಪನೆಗಳನ್ನು ಹರಡುತ್ತಿದ್ದಾರೆ. ಈ ಮಸೂದೆಯೂ ಯಾವುದೇ ಸಮುದಾಯದ ಧಾರ್ಮಿಕ ಆಚರಣೆಗಳಿಗೆ ಅಡ್ಡಿಪಡಿಸುವುದಿಲ್ಲ. ಪಾರದರ್ಶಕತೆ ಮತ್ತು ವಕ್ಫ್ ಆಸ್ತಿಗಳ ದುರುಪಯೋಗವನ್ನು ತಡೆಗಟ್ಟುವ ಗುರಿಯನ್ನು ಹೊಂದಿದೆ. ಯಾವುದೇ ಮುಸ್ಲಿಮೇತರರು ವಕ್ಫ್ ಮಂಡಳಿಗೆ ಬರುವುದಿಲ್ಲ. ಇದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಿ. ಧಾರ್ಮಿಕ ಸಂಸ್ಥೆಗಳನ್ನು ನಿರ್ವಹಿಸುವವರಲ್ಲಿ ಯಾವುದೇ ಮುಸ್ಲಿಮೇತರರನ್ನು ಸೇರಿಸುವ ನಿಬಂಧನೆ ಇಲ್ಲ, ಹಾಗೆ ಮಾಡಲು ನಾವೂ ಬಯಸೋದಿಲ್ಲ. ತಮ್ಮ ವೋಟ್ಬ್ಯಾಂಕ್ಗಾಗಿ ಅಲ್ಪ ಸಂಖ್ಯಾತರಲ್ಲಿ ಭಯ ಹುಟ್ಟಿಸಲು ಈ ರೀತಿಯ ತಪ್ಪು ಕಲ್ಪನೆಗಳನ್ನು ಹರಡಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.