ಬೆಂಗಳೂರು,ಏ.03(DaijiworldNews/AK): ರಾಜ್ಯ ಸರ್ಕಾರದ ದರ ಏರಿಕೆ ನೀತಿ ಖಂಡಿಸಿ ಬಿಜೆಪಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ.ಇಂದು ಮಧ್ಯಾಹ್ನಕ್ಕೆ ಅಹೋರಾತ್ರಿ ಹೋರಾಟ ಕೊನೆಗೊಳಿಸಲು ನಿರ್ಧರಿಸಲಾಗಿದೆ.

ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ತೀವ್ರಗೊಳಿಸಲಿದೆ. ಸಿಎಂ ಮನೆ ಮುತ್ತಿಗೆ ಯತ್ನ ಹಾಗೂ ರಸ್ತೆ ತಡೆಗೆ ಬಿಜೆಪಿ ನಿರ್ಧರಿಸಿದೆ. ಫ್ರೀಡಂ ಪಾರ್ಕ್ ಇರುವ ಶೇಷಾದ್ರಿ ರಸ್ತೆ ತಡೆ ನಡೆಸುವ ಮೂಲಕ ಸರ್ಕಾರಕ್ಕೆ ಬಿಜೆಪಿ ನಾಯಕರು ಬಿಸಿ ಮುಟ್ಟಿಸಲಿದ್ದಾರೆ.
ಪ್ರತಿಭಟನೆ ಕುರಿತು ಮಾತನಾಡಿದ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಇಂದು ಬೆಳಗ್ಗೆ 11ಕ್ಕೆ ಸಿಎಂ ಮನೆ ಮುತ್ತಿಗೆ ಹಾಕ್ತೇವೆ. 5-10 ಸಾವಿರ ಕಾರ್ಯಕರ್ತರು ಬರ್ತಾರೆ. ಸಿಎಂ ಮನೆ ಮುತ್ತಿಗೆ ಹಾಕಿ ರಸ್ತೆ ತಡೆ ಮಾಡ್ತೇವೆ. ನಾವು ಗಾಂಧಿ ತತ್ವದಡಿ ಶಾಂತಿಯುತವಾಗಿ ಹೋರಾಟ ಮಾಡ್ತೇವೆ ಎಂದರು .
ಗಾಂಧಿ ತತ್ವದ ಮೇಲೆ ಕಾಂಗ್ರೆಸ್ಗೆ ನಂಬಿಕೆ ಇದ್ದರೆ, ನಮ್ಮ ಹೋರಾಟಕ್ಕೆ ಅವಕಾಶ ಕೊಡಲಿ. ಈ ಸರ್ಕಾರ ಚಂಡಿ ಹೆಂಡ್ತಿ ಥರ. ನಾವೇನೆ ಮಾಡಿದ್ರೂ ಅದಕ್ಕೆ ವಿರುದ್ಧ ಮಾಡ್ತಿದೆ ಸರ್ಕಾರ. ದರ ಏರಿಕೆ ಬೇಡ ಅಂದರೆ ಮಾಡ್ತೀವಿ ಅಂತಿದ್ದಾರೆ. ಡೀಸೆಲ್ ದರ ಏರಿಸಿದ್ರು. ಈಗ ನೀರಿನ ದರ ಏರಿಸಲು ಹೊರಟಿದ್ದಾರೆ. ಇದು ಭಂಡತನದ ಸರ್ಕಾರ, ಜಿಲ್ಲೆಗಳಲ್ಲೂ ಹೋರಾಟ ಮಾಡ್ತೇವೆ. ಇವರಿಗೆ ಲೂಟಿ ಹೊಡೆಯಲು ಬಿಡಲ್ಲ ಎಂದು ತಿಳಿಸಿದರು.