ಬೆಂಗಳೂರು, ಏ.19 (DaijiworldNews/AA): ಮಾಜಿ ಡಾನ್ ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ದುಷ್ಕರ್ಮಿಗಳು ಶೂಟೌಟ್ ಮಾಡಿರುವ ಘಟನೆ ರಾಮನಗರ ಜಿಲ್ಲೆಯ ಬಿಡದಿಯಲ್ಲಿ ತಡರಾತ್ರಿ ನಡೆದಿದೆ.



ಬಿಡದಿಯಲ್ಲಿರುವ ಮುತ್ತಪ್ಪ ರೈ ನಿವಾಸದ ಮುಂಭಾಗದ ಕಾಂಪೌಂಡ್ ಬಳಿ ತಡರಾತ್ರಿ 2 ಸುತ್ತಿನ ಗುಂಡಿನ ದಾಳಿ ನಡೆದಿದೆ. ರಿಕ್ಕಿ ರೈ ಅವರನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ಶೂಟೌಟ್ ಮಾಡಿದ್ದಾರೆ. ರಿಕ್ಕಿ ರೈ ಅವರ ಮೂಗು, ಕೈಗೆ ಗುಂಡು ತಾಕಿ ಗಾಯಗೊಂಡಿದ್ದಾರೆ.
ಪ್ರತಿ ಬಾರಿ ರಿಕ್ಕಿ ರೈ ಅವರೇ ಕಾರು ಚಲಾಯಿಸುತ್ತಿದ್ದರು. ಇದೇ ಕಾರಣಕ್ಕೆ ಡ್ರೈವಿಂಗ್ ಸೀಟ್ ಟಾರ್ಗೆಟ್ ಮಾಡಿದ ದುಷ್ಕರ್ಮಿಗಳು ರಿಕ್ಕಿ ರೈ ಮೇಲೆ 2 ಸುತ್ತಿನ ಗುಂಡಿನ ದಾಳಿ ನಡೆಸಿದ್ದಾರೆ. ಆದರೆ ಹಿಂಬದಿ ಸೀಟ್ನಲ್ಲಿದ್ದ ರಿಕ್ಕಿ ರೈ ಅವರಿಗೆ ಗಾಯಗಳಾಗಿದ್ದು, ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ಸ್ಥಳಕ್ಕೆ ರಾಮನಗರ ಎಸ್ಪಿ ಶ್ರೀನಿವಾಸ್ ಗೌಡ ಮತ್ತು ಡಿವೈಎಸ್ಪಿ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.