ಲಕ್ನೋ, ಏ.19 (DaijiworldNews/AK): ನೇಪಾಳದ ಪೊಖಾರಾಕ್ಕೆ ಭಾರತೀಯ ಪ್ರವಾಸಿಗರನ್ನು ಕೊಂಡೊಯ್ಯುತ್ತಿದ್ದ ಬಸ್ ಒಂದು ಡಾಂಗ್ ಜಿಲ್ಲೆಯ ಚಿಸಾಪಾನಿಯಲ್ಲಿ ಅಪಘಾತಕ್ಕೀಡಾಗಿದೆ.

ದುರ್ಘಟನೆಯಲ್ಲಿ 25 ಜನ ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.ಪ್ರಾಥಮಿಕ ತನಿಖೆಯ ಪ್ರಕಾರ, ಬಸ್ನ ಬ್ರೇಕ್ ವಿಫಲವಾದ ಕಾರಣ ಚಾಲಕ ಗೋಡೆಗೆ ಡಿಕ್ಕಿ ಹೊಡೆದಿದ್ದಾನೆ.
ಗಾಯಗೊಂಡ 25 ಪ್ರವಾಸಿಗರಲ್ಲಿ 19 ಜನರನ್ನು ಉತ್ತರ ಪ್ರದೇಶದ ತುಲಸೀಪುರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಕೆಲವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ. ಆದ್ರೆ ಗಂಭೀರವಾಗಿ ಗಾಯಗೊಂಡ ಮೂವರನ್ನು ನೇಪಾಳದ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಇರಿಸಲಾಗಿದೆ ಎಂದು ತುಲಸೀಪುರದ ಸರ್ಕಲ್ ಆಫೀಸರ್ ಬೃಜನಂದನ್ ರಾಯ್ ತಿಳಿಸಿದ್ದಾರೆ.
ಈ ಬಸ್ ಲಕ್ನೋದಿಂದ ಪೊಖಾರಾಕ್ಕೆ ಪ್ರಯಾಣಿಸುತ್ತಿತ್ತು, ಮತ್ತು ಗಾಯಗೊಂಡವರಲ್ಲಿ ಹೆಚ್ಚಿನವರು ಉತ್ತರ ಪ್ರದೇಶದ ಲಕ್ನೋ, ಸೀತಾಪುರ, ಹರದೋಯ್ ಮತ್ತು ಬರಾಬಂಕಿ ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ. ಅಪಘಾತದ ಸುದ್ದಿ ತಿಳಿದ ಕೂಡಲೇ, ನೇಪಾಳದ ಗಢವಾ ಪೊಲೀಸರು ಸ್ಥಳಕ್ಕೆ ಧಾವಿಸಿ, ಗಾಯಾಳುಗಳನ್ನು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು.