ಬೆಂಗಳೂರು,ಏ.23DaijiworldNews/AK): ಜಮ್ಮು ಕಾಶ್ಮೀರದ ಪಹಲ್ಗಾಂವ್ನಲ್ಲಿ ಪ್ರವಾಸಿಗರನ್ನು ಗುರಿಯಾಗಿಟ್ಟುಕೊಂಡು ಅವರ ಹೆಸರನ್ನು ಹಾಗೂ ಧರ್ಮವನ್ನು ಕೇಳಿ ಖಾತರಿಪಡಿಸಿಕೊಂಡು ಹಿಂದೂಗಳನ್ನು ಅಥವಾ ಇಸ್ಲಾಮೇತರರನ್ನು ಗುರಿಯಾಗಿಸಿಕೊಂಡು ಹತ್ಯೆಮಾಡಿರುವುದು ಖಂಡನೀಯ ಎಂದು ವಿಧಾನ ಪರಿಷತ್ತಿನ ಸದಸ್ಯ ಸಿ.ಟಿ ರವಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ಇಸ್ಲಾಂ ಹೆಸರಿನಲ್ಲಿ ಜಾಗತಿಕ ಭಯೋತ್ಪಾದನೆ ನಡೆಯುತ್ತಿದ್ದು, ಯಾವ ಕಾರಣಕ್ಕೆ ನಡೆಯುತ್ತಿದೆ ಎಂಬುದಕ್ಕೆ ಮತ್ತಷ್ಟು ಸಾಕ್ಷಿಯ ಅವಶ್ಯಕತೆ ಇಲ್ಲ. ಸದರಿ ಭಯೋತ್ಪಾದಕರು ದಾಳಿಯ ಸಂದರ್ಭದಲ್ಲಿ ನಿಮ್ಮ ಭಾಷೆ ಯಾವುದು ಎಂದು ಕೇಳಲಿಲ್ಲ; ನಿಮ್ಮ ಜಾತಿ ಯಾವುದು ಎಂದು ಕೇಳಲಿಲ್ಲ; ನೀವು ತಮಿಳುನಾಡಿನಿಂದ ಬಂದಿದ್ದೀರಾ, ಕೇರಳದಿಂದ ಬಂದಿದ್ದೀರಾ ಅಥವಾ ಕರ್ನಾಟಕದಿಂದ ಬಂದಿದ್ದೀರಾ ಎಂದು ಪ್ರದೇಶವನ್ನು ಕೇಳಿಲ್ಲ ಎಂದರು.
ಪತ್ನಿಯ ಎದುರುಗಡೆ ಪತಿಯನ್ನು, ಚಿಕ್ಕಮಕ್ಕಳ ಎದುರು ತಂದೆಯನ್ನು ಕೊಲ್ಲುವುದರ ಮೂಲಕ ನಮಗೆ ಮಾನವೀಯತೆ ಇಲ್ಲ; ಮಾನವೀಯತೆಗೂ ನಮಗೂ ಸಂಬಂಧ ಇಲ್ಲ. ಅನ್ನುವ ರಾಕ್ಷಸಿ ಮನೋಭಾವವನ್ನು ಭಯೋತ್ಪಾದಕರು ತೋರಿಸಿದ್ದಾರೆ ಎಂದು ಆಕ್ಷೇಪಿಸಿದರು.
ಭಯೋತ್ಪಾದಕ ಚಟುವಟಿಕೆ ನಡೆದಾಗ ಅದನ್ನು ಖಂಡಿಸಿ ಶೋಕವ್ಯಕ್ತಪಡಿಸಿ ಅಮೇಲೆ ನಾವು ಮರೆತುಬಿಡುತ್ತೇವೆ. ಆ ಕುಟುಂಬಗಳಿಗೆ ಸಾಂತ್ವನ ಹೇಳಿ ಒಂದಷ್ಟು ಪರಿಹಾರ ಕೊಟ್ಟು ನಾವು ಮರೆತುಬಿಡುತ್ತೇವೆ. ಇದರಲ್ಲಿ ಯಾವ ಯಾವ ರಾಜ್ಯದವರು ಎಷ್ಟು ಜನ, ಯಾವ ಜಾತಿಗೆ ಸೇರಿದವರು ಎಂದು ಲೆಕ್ಕಹಾಕುತ್ತೇವೆ; ಆದರೆ, ಭಯೋತ್ಪಾದಕರ ದೃಷ್ಟಿಗೆ ಇಸ್ಲಾಂ ಹೊರತುಪಡಿಸಿ ಉಳಿದವರೆಲ್ಲರೂ ಕಾಫಿರರು ಮತ್ತು ಈ ಭಯೋತ್ಪಾದನೆಗೆ ಬಹಳ ದೊಡ್ಡ ಇತಿಹಾಸವಿದೆ ಎಂದು ತಿಳಿಸಿದರು.
ಮೊಹಮದ್ ಗಜನಿ, ಘೋರಿ, ಖಿಲ್ಜಿ, ಔರಂಗಜೇಬ್, ಟಿಪ್ಪು ಇವರೆಲ್ಲರೂ ರಾಜಕೀಯ ಸಾಮಥ್ರ್ಯದ ಮೇಲೆ ಭೀತಿ ಹುಟ್ಟಿಸುವಂತಹ ಹಾಗೂ ಹತ್ಯೆ ಮಾಡುವ ಸಾಮೂಹಿಕ ನರಮೇಧ ಮಾಡುವ ಕೆಸಲ ಮಾಡಿದ್ದರು. ಜೊತೆಗೆ ಮತಾಂತರ ಮಾಡುವ ಕೆಲಸ ಮಾಡಿದ್ದರು ಎಂದು ಟೀಕಿಸಿದರು.
ನಾವು ಈ ಘಟನೆಗೆ ಕಾರಣರಾದ ನಾಲ್ಕು ಜನ ಭಯೋತ್ಪಾದಕರನ್ನು ಹುಡುಕಿ ಕೊಂದು ಬಿಡಬಹುದು. ಆದರೆ ಭಯೋತ್ಪಾದನೆ ನಿಲ್ಲುತ್ತದೆಯೇ? ಹೊಸ ರೂಪದಲ್ಲಿ, ಹೊಸ ಸಂಘಟನೆ ಹೆಸರಿನಲ್ಲಿ, ಹೊಸ ಜನರು ರಕ್ತಬೀಜಾಸುರರ ರೀತಿಯಲ್ಲಿ ಹುಟ್ಟುತ್ತಾರೆ. ಹಾಗಾದರೆ ಆ ರಕ್ತಬೀಜಾಸುರನಿಗೆ ಆ ಶಕ್ತಿ ಬಂದಿದ್ದು ಎಲ್ಲಿಂದ?. ಆ ಶಕ್ತಿಯನ್ನು ಕೊನೆಗಾಣಿಸದೇ ಇದ್ದರೆ. ನಿರ್ಮೂಲನೆ ಮಾಡದೇ ಇದ್ದರೆ. ಅದನ್ನು ಬದಲಾಯಿಸದೇ ಇದ್ದರೆ ಭಯೋತ್ಪಾದನೆ ನಿಲ್ಲುವುದಿಲ್ಲ. ಇದು ಕಟು ಸತ್ಯ. ಇದು ವಾಸ್ತವಿಕ ಸತ್ಯ ಎಂದು ವಿಶ್ಲೇಷಿಸಿದರು.