ಬೆಂಗಳೂರು, ಮೇ. 01 (DaijiworldNews/AA): ಜನಗಣತಿಯೊಂದಿಗೆ, ಜಾತಿ ಗಣತಿಯನ್ನು ನಡೆಸುವ ಕೇಂದ್ರ ಸಚಿವ ಸಂಪುಟದ ಮಹತ್ವದ ನಿರ್ಣಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ.

ಬೆಂಗಳೂರಿನಲ್ಲಿಂದು ತುರ್ತು ಸುದ್ದಿಗೋಷ್ಠಿಯಲ್ಲಿ ಅವರು, ಜಾತಿ ಗಣತಿಯ ಜೊತೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಬೇಕಾಗಿದೆ. ಸಮಾಜದಲ್ಲಿ ಹಿಂದುಳಿದವರನ್ನು ಮುಖ್ಯವಾಹಿನಿಗೆ ತರುವ ಕಾರ್ಯವಾಗಬೇಕಾಗಿದೆ. ಖಾಸಗಿ ವಲಯದಲ್ಲೂ, ಮೀಸಲಾತಿ ಪದ್ಧತಿ ಜಾರಿಗೊಳಿಸಬೇಕು ಹಾಗೂ ಮೀಸಲಾತಿಯ ಶೇಕಡ ೫೦ರಷ್ಟು ಗರಿಷ್ಠ ಮಿತಿಗೆ ವಿನಾಯಿತಿ ನೀಡಲು ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಸರ್ಕಾರವನ್ನು ಇದೇ ಸಂದರ್ಭದಲ್ಲಿ ಅವರು ಒತ್ತಾಯಿಸಿದರು.
ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ನಡೆಸಲಾಗಿರುವ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷಾ ವರದಿಯಲ್ಲಿ, ಜಾತಿಗಣತಿಯನ್ನು ನಡೆಸಲಾಗಿದೆ. ಈ ವರದಿಯ ಕುರಿತು ಲಿಖಿತ ಅಭಿಪ್ರಾಯ ನೀಡುವಂತೆ ಎಲ್ಲ ಸಚಿವರಿಗೆ ಸೂಚಿಸಲಾಗಿದ್ದು, ಮುಂದಿನ ಸಚಿವ ಸಂಪುಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಹಾಗೆಯೇ ಪರಿಶಿಷ್ಟರಲ್ಲಿನ ಒಳಮೀಸಲಾತಿ ಸಂಬಂಧ, ಎಚ್.ಎನ್. ನಾಗಮೋಹನ್ ದಾಸ್ ಆಯೋಗದ ಸಮೀಕ್ಷೆ, ನಿಗದಿತ ವೇಳಾಪಟ್ಟಿಯಂತೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.