ಕಲಬುರಗಿ, ಮೇ. 03 (DaijiworldNews/AA): ದೇಶದ ಐಕ್ಯತೆಗಾಗಿ ಮೋದಿ ಸರ್ಕಾರ ಏನೇ ಕ್ರಮ ಕೈಗೊಂಡರೂ ನಮ್ಮ ಬೆಂಬಲವಿದೆ. ಎಲ್ಲಾ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ರಮ ಕೈಗೊಳ್ಳಬೇಕು. ಆದರೆ ಇದರಲ್ಲೂ ರಾಜಕೀಯ ಆಗಬಾರದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರೀ ಭಾಷಣ ಮಾಡಿಕೊಂಡು ಕುಳಿತರೆ ಆಗಲ್ಲ. ನಮ್ಮ ದೇಶವನ್ನು ಕೆಣಕಿದ್ರೆ ನಾವು ಸುಮ್ಮನಿರಬಾರದು. ನಮ್ಮನ್ನ ಕೆಣಕಿದವರಿಗೆ ತಕ್ಕ ಉತ್ತರ ನೀಡಬೇಕು. ಪಾಕಿಸ್ತಾನದ ಮೇಲೆ ಕ್ರಮ ಆಗಲಿ ಎಂದು ನಾವು ಬೆಂಬಲ ಕೊಟ್ಟಿದ್ದೇವೆ. ನಮಗೆ ದೇಶ ಮುಖ್ಯ. ಹೀಗಾಗಿ ಯಾವುದೇ ಕ್ರಮ ಕೈಗೊಂಡರೂ ನಮ್ಮ ಬೆಂಬಲ ಇರುತ್ತದೆ ಎಂದು ಹೇಳಿದರು.
ಜಾತಿ ಜನಗಣತಿ ಬಗ್ಗೆ ನಾವು ಮೊದಲೇ ಆಗ್ರಹಿಸಿದ್ದೆವು. ಆದರೆ ಆಗ ಜಾತಿ ವಿಷಬೀಜ ಬಿತ್ತುತ್ತಾರೆ ಎಂದು ನಮ್ಮನ್ನು ಹೀಯಾಳಿಸಿದ್ದರು. ಬಿಹಾರ ಚುನಾವಣಾ ಗಿಮಿಕ್ ಇರಬಹುದು. ಆದರೆ ನಾನು ಅದರ ಬಗ್ಗೆ ಮಾತನಾಡಲ್ಲ. ದುರುದ್ದೇಶದಿಂದ ನೀವು ನಡೆದುಕೊಂಡರೆ ಯಾರೂ ಸಹಿಸಲ್ಲ. ಒಳ್ಳೆಯ ಉದ್ದೇಶದಿಂದ ಮಾಡಿ ಎಂದರು.