ಬೆಂಗಳೂರು, ಮೇ. 04 (DaijiworldNews/AK): ಹಿರಿಯ ಕಾಂಗ್ರೆಸ್ ನಾಯಕರು ಸುಳ್ಳು ಹೇಳುತ್ತಿದ್ದು, ಅವರು ತಮ್ಮ ಮಾತನ್ನು ಸಾಬೀತುಪಡಿಸಿದರೆ ನಾನು ವಿರೋಧ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡುವುದಲ್ಲದೆ, ರಾಜಕೀಯದಿಂದ ನಿವೃತ್ತಿ ಘೋಷಿಸುತ್ತೇನೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಸವಾಲು ಹಾಕಿದ್ದಾರೆ.

ಬಿಜೆಪಿ ಕಾರ್ಯಾಲಯದ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಜಯರಾಮ್ ರಮೇಶ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಪ್ರಿಯಾಂಕ ಖರ್ಗೆ ಅವರು, ಚುನಾವಣೆಯಲ್ಲಿ ಬಾಬಾಸಾಹೇಬ್ ಅಂಬೇಡ್ಕರರನ್ನು ಕಾಂಗ್ರೆಸ್ ಸೋಲಿಸಿಲ್ಲ. ಬಾಬಾಸಾಹೇಬರನ್ನು ಸೋಲಿಸಿದ್ದು ಕಮ್ಯುನಿಸ್ಟ್ ಪಕ್ಷದ ಡಾಂಗೆ ಮತ್ತು ಆರ್ಎಸ್ಎಸ್ನ ಸಾವರ್ಕರ್ ಎಂದು ಹೇಳಿದ್ದಾರೆ. ಈ ನಾಲ್ವರು ಮುಖಂಡರು ತಮ್ಮ ಮಾತನ್ನು ಸಾಬೀತುಪಡಿಸಿದರೆ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯದಿಂದ ನಿವೃತ್ತಿ ಘೋಷಿಸಲು ಸಿದ್ಧ ಎಂದು ಪ್ರಕಟಿಸಿದರು
ಕಾಂಗ್ರೆಸ್ ನಾಯಕರು ಬಾಬಾಸಾಹೇಬ್ ಅಂಬೇಡ್ಕರ್ ರವರ ಸೋಲಿನ ಸಂಬಂಧ ತಮ್ಮ ಮಾತನ್ನು ಸಾಬೀತುಪಡಿಸಿದರೆ ನನ್ನ ಸ್ವಂತ ವೇತನದಲ್ಲಿ ಒಂದು ಲಕ್ಷದ ಒಂದು ರೂಪಾಯಿಯನ್ನು ಬಹುಮಾನವಾಗಿ ನೀಡುತ್ತೇನೆ. ಒಂದು ವೇಳೆ ಸಾಬೀತುಪಡಿಸುವಲ್ಲಿ ವಿಫಲರಾದರೆ ಮೇಲಿನ ನಾಲ್ವರು ಮುಖಂಡರು ರಾಜೀನಾಮೆ ನೀಡಲು ಮತ್ತು ರಾಜಕೀಯದಿಂದ ನಿವೃತ್ತಿ ನೀಡಲು ಸಿದ್ದರಿದ್ದಾರೆಯೇ? ಎಂದು ಪ್ರಶ್ನಿಸಿದರು.
ಖರ್ಗೆ ಯವರು ಮತ್ತು ಅವರ ಮಗ ಡಬಲ್ ಇಂಜಿನ್ ಸುಳ್ಳುಗಾರರು. ಇಂತಹ ಖರ್ಗೆಗಳಿಂದ ಬಾಬಾಸಾಹೇಬ್ ಮತ್ತು ದಲಿತರಿಗೆ ಅನ್ಯಾಯವಾಗಿದೆ. ಅಂಬೇಡ್ಕರ್ ರವರಿಗೆ ಈ ದೇಶದಲ್ಲಿ ನ್ಯಾಯ ಸಿಗಲಿಲ್ಲವೆಂದು ಹೇಳಿದ್ದು, ಕಾಂಗ್ರೆಸ್ ಪಕ್ಷವು 65 ವರ್ಷ ಆಳ್ವಿಕೆ ಮಾಡಿ ಏಕೆ ನ್ಯಾಯ ಕೊಡಲಿಲ್ಲ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನಾಯಕರು ಸಂವಿಧಾನ ಕಾಪಾಡುವುದು ನಮ್ಮ ಹಕ್ಕು ಎಂದು ಹೇಳುತ್ತಾರೆ. ಸಂವಿಧಾನ ಕಾಪಾಡುವುದು ಮಾತ್ರ ಕಾಂಗ್ರೆಸ್ ನವರ ಹಕ್ಕು ಮಾತ್ರವೇ? ಎಂದು ಕೇಳಿದರು.
ಸಂವಿಧಾನವನ್ನು ಕಾಪಾಡುವುದು ಈ ರಾಜ್ಯದ ಮತ್ತು ದೇಶದ ಜನರ ಹಕ್ಕಾಗಿದೆ. ಬಾಬಾಸಾಹೇಬರ ಸಂವಿಧಾನದಿಂದ ಈ ದೇಶದ ಚಹಾ ಮಾರುವ ವ್ಯಕ್ತಿ ಪ್ರಧಾನಿಯಾಗಿದ್ದಾರೆ ಎಂದು ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ರವರು ಹೇಳಿದ್ದು, ಕಾಂಗ್ರೆಸ್ ನಾಯಕರ ಬಾಯಿಯಲ್ಲಿ ಇಂತಹ ಮಾತುಗಳು ಬಂದಿರುವುದಿಲ್ಲ. ಸಂವಿಧಾನಕ್ಕೆ ನಿಜವಾದ ಅಪಮಾನ ಮಾಡಿರುವುದು ಅದು ಕಾಂಗ್ರೆಸ್ ನವರ ಕಾಲದಲ್ಲಿ ಎಂದು ಟೀಕಿಸಿದರು.