ಬೆಂಗಳೂರು, ಮೇ. 05 (DaijiworldNews/AA): ರಾಜ್ಯದಲ್ಲಿರುವ ಪಾಕಿಸ್ತಾನಿ ಪ್ರಜೆಗಳನ್ನು ಕೂಡಲೇ ತೆರವು ಮಾಡುವಂತೆ ಆಗ್ರಹಿಸಿ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ರಾಜ್ಯಪಾಲರಿಗೆ ಸಲ್ಲಿಸುವ ಮನವಿ ಪತ್ರಕ್ಕೆ ಸಹಿ ಹಾಕುವ ಅಭಿಯಾನಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬೆಂಗಳೂರಿನಲ್ಲಿಂದು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು, ಅಪರಾಧಿಗಳ ರಾಜ್ಯವಾಗುತ್ತಿದೆ ಎಂದು ಈ ಹಿಂದೆ ಬಿಹಾರದಲ್ಲಿ ಪ್ರತಿನಿತ್ಯ ಅಪರಾಧ ಕೃತ್ಯಗಳು ನಡೆಯುತ್ತಿದ್ದವು. ಈಗ ಅಲ್ಲಿ ಶಾಂತಿ ನೆಲೆಸಿದೆ. ಕರ್ನಾಟಕ, ಬಿಹಾರದ ರೀತಿ ಆಗಿದೆ. ರಾಜ್ಯ ಸರ್ಕಾರ ಈ ಬಗ್ಗೆ ಗಮನ ಹರಿಸುತ್ತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದಾಗಲೆಲ್ಲಾ, ಭಯೋತ್ಪಾದಕರು, ಸಮಾಜಘಾತುಕರ ಕೈ ಮೇಲಾಗುತ್ತಿದೆ. ಬೇರೆ ಬೇರೆ ಪ್ರಕರಣದಲ್ಲಿ ಬಂಧನಕ್ಕೊಳಗಾದವರ ವಿರುದ್ಧದ ಪ್ರಕರಣಗಳನ್ನು ಹಿಂಪಡೆದಿರುವುದು ಖಂಡನೀಯ ಎಂದರು.
ಮಂಗಳೂರು, ಮೈಸೂರು, ಪುತ್ತೂರು, ಸುಳ್ಯ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಭಯೋತ್ಪಾದಕರು ಸಮಾಜದ್ರೋಹಿಗಳಿಗೆ ಹಣಕಾಸಿನ ನೆರವು ನೀಡುತ್ತಿದ್ದವರು ಸಿಕ್ಕಿಹಾಕಿಕೊಂಡಿದ್ದಾರೆ. ವಿವಿಧ ಪ್ರಕರಣಗಳ ಹಿನ್ನೆಲೆಯಲ್ಲಿ ಪಿಎಫ್ಐ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ ಎಂದು ತಿಳಿಸಿದರು.