ನವದೆಹಲಿ, ಮೇ. 07 (DaijiworldNews/AA): ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಇದೀಗ ಪಾಕಿಸ್ತಾನಕ್ಕೆ ಭಾರತೀಯ ಸೇನೆ ತಿರುಗೇಟು ನೀಡಿದೆ. ಮಂಗಳವಾರ ತಡರಾತ್ರಿ 1.30 ರ ಸುಮಾರಿಗೆ ಪಾಕಿಸ್ತಾನದ ಉಗ್ರರ ಅಡಗುದಾಣಗಳ ಮೇಲೆ ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಕ್ಷಿಪಣಿ ದಾಳಿ ನಡೆಸಿದೆ. ದಾಳಿಯ ನಂತರ, ''ಜೈ ಹಿಂದ್, ನ್ಯಾಯ ಸಿಕ್ಕಿದೆ'' ಎಂದು ಭಾರತೀಯ ಸೇನೆಯು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದೆ.

ಈ ದಾಳಿಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ರಕ್ಷಣಾ ಸಚಿವಾಲಯವು, ''ನೇಪಾಳಿ ಪ್ರಜೆ ಸೇರಿದಂತೆ 26 ಜನರ ಪ್ರಾಣವನ್ನು ಬಲಿ ಪಡೆದ ಬರ್ಬರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ನಿಖರ ಮತ್ತು ಸಂಯಮದ ಪ್ರತಿಕ್ರಿಯೆಯಾಗಿ ಭಾರತ ಆಪರೇಷನ್ ಸಿಂಧೂರ್ ಪ್ರಾರಂಭಿಸಿದೆ'' ಎಂದು ಮಾಹಿತಿ ನೀಡಿತ್ತು.
ಇನ್ನು ಈ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಮುನ್ನ ಭಾರತೀಯ ಸೇನೆಯು, ''ಸೈನ್ಯವು ದಾಳಿ ಮಾಡಲು ಸಿದ್ಧವಾಗಿದೆ, ಗೆಲ್ಲಲು ತರಬೇತಿ ಪಡೆದಿದೆ'' ಎಂದು ಪೋಸ್ಟ್ ಮಾಡಿತ್ತು.
ಗಡಿಯಾಚೆಗಿನ ಭಯೋತ್ಪಾದನಾ ಪೋಷಣೆಯ ಬೇರುಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ 9 ಭಯೋತ್ಪಾದಕ ಮೂಲಸೌಕರ್ಯ ತಾಣಗಳನ್ನು ಕೇಂದ್ರೀಕರಿಸಿ ದಾಳಿಗಳನ್ನು ನಡೆಸಲಾಗಿದೆ. ಮುಖ್ಯವಾಗಿ, ಯಾವುದೇ ಪಾಕಿಸ್ತಾನಿ ಸೇನಾ ಸೌಲಭ್ಯದ ಮೇಲೆ ದಾಳಿ ನಡೆದಿಲ್ಲ. ಅನಗತ್ಯ ಪ್ರಚೋದನೆಯನ್ನು ತಪ್ಪಿಸಿ, ಅಪರಾಧಿಗಳನ್ನು ಹೊಣೆಗಾರರನ್ನಾಗಿ ಮಾಡುವ ಭಾರತದ ಸಂಕಲ್ಪವನ್ನು ಈ ಕಾರ್ಯಾಚರಣೆ ಪ್ರತಿಬಿಂಬಿಸುತ್ತದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.