ಕೋಲಾರ, ಮೇ. 07 (DaijiworldNews/AK): ಪ್ರಧಾನಿ ನರೇಂದ್ರ ಮೋದಿಜೀ ಅವರು ಪಾಕಿಸ್ತಾನ ಮತ್ತು ಅಲ್ಲಿನ ಉಗ್ರರ ಅಟ್ಟಹಾಸಕ್ಕೆ ಪ್ರತೀಕಾರಕ್ಕೆ ದಿಟ್ಟ ಉತ್ತರ ನೀಡಲು ಮುಂದಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಮೆಚ್ಚುಗೆ ಸೂಚಿಸಿದರು.

ಕೋಲಾರದ ಶ್ರೀ ಕೋಲಾರಮ್ಮ ದೇವಸ್ಥಾನದಲ್ಲಿ ಇಂದು ಭಾರತೀಯ ಯೋಧರ ಗೆಲುವಿಗಾಗಿ ಪ್ರಾರ್ಥಿಸಿ ಪೂಜೆ ಸಲ್ಲಿಸಿದ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಾಕಿಸ್ತಾನದ ಉಗ್ರರ ಅಡಗುದಾಣಗಳ ಮೇಲೆ ನಿನ್ನೆಯಿಂದ ದಾಳಿ ಆರಂಭವಾಗಿದೆ. ನಮ್ಮ ಯೋಧರಿಗೆ ಹೋರಾಟದಲ್ಲಿ ಯಶಸ್ಸು ಸಿಗಲೆಂದು ಪ್ರಾರ್ಥನೆ ಸಲ್ಲಿಸಿದ್ದಾಗಿ ತಿಳಿಸಿದರು.
ಕಾಂಗ್ರೆಸ್ಸಿನ ದ್ವಂದ್ವ ನೀತಿ ಮತ್ತು ದೇಶವಿರೋಧಿ ನೀತಿಯಿಂದ ಉಗ್ರಗಾಮಿಗಳು ಅಟ್ಟಹಾಸದಿಂದ ಮೆರೆಯುವಂತಾಗಿದೆ ಎಂದು ಅವರು ಉತ್ತರ ನೀಡಿದರು. ಕಾಂಗ್ರೆಸ್ಸಿನ ಇದೇ ನೀತಿಯಿಂದ ಜಮ್ಮು- ಕಾಶ್ಮೀರದ ಸಾವಿರಾರು ಹಿಂದೂಗಳು ಮನೆಮಠವನ್ನು ಕಳೆದುಕೊಳ್ಳುವಂತಾಯಿತು. ಅಲ್ಲದೇ, ಸಾವಿರಾರು ಯೋಧರು ಪ್ರಾಣ ಕಳೆದುಕೊಂಡರು ಎಂದು ಟೀಕಿಸಿದರು.
ಪ್ರಧಾನಿ ನರೇಂದ್ರ ಮೋದಿಜೀ ಅವರ ದಿಟ್ಟ ನಾಯಕತ್ವವು ನಮ್ಮ ಯೋಧರಿಗೆ ದೊಡ್ಡ ಶಕ್ತಿಯನ್ನು ತಂದು ಕೊಟ್ಟಿದೆ. ಉಗ್ರರ ವಿರುದ್ಧ ಮತ್ತು ಪಾಕಿಸ್ತಾನದ ವಿರುದ್ಧ ನಡೆಯುವ ಹೋರಾಟದಲ್ಲಿ ನಮ್ಮ ಯೋಧರಿಗೆ ಯಶಸ್ಸು ಸಿಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.