ನವದೆಹಲಿ, ಮೇ. 07 (DaijiworldNews/AK):ಭಾರತವು ಪಾಕಿಸ್ತಾನದ ಉಗ್ರರ ತಾಣಗಳ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ವಾಯುನೆಲೆಯನ್ನು ನಿರ್ಬಂಧಿಸಲಾಗಿದ್ದು, ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ 165ಕ್ಕೂ ಹೆಚ್ಚು ವಿಮಾನಯಾನವನ್ನು ಬಂದ್ ಮಾಡಲಾಗಿದೆ.

ಜಮ್ಮು, ಶ್ರೀನಗರ, ಅಮೃತಸರ, ಲೇಹ್, ಚಂಡೀಗಢ, ಜೋಧ್ಪುರ, ಧರ್ಮಶಾಲಾ, ಬಿಕಾನೇರ್, ಗ್ವಾಲಿಯರ್, ಕಿಶನ್ಗಢ ಮತ್ತು ರಾಜ್ಕೋಟ್ಗೆ ತೆರಳುವ ಮತ್ತು ಅಲ್ಲಿಂದ ಹೊರಡುವ ವಿಮಾನಗಳನ್ನು ಮೇ 10ರವರೆಗೆ ಇಂಡಿಗೋ ರದ್ದುಗೊಳಿಸಿದೆ.ವಿಮಾನ ನಿಲ್ದಾಣಕ್ಕೆ ಹೋಗುವ ಮೊದಲು ಪ್ರಯಾಣಿಕರು ತಮ್ಮ ಪ್ರಯಾಣದ ಸ್ಥಿತಿಯನ್ನು ಪರಿಶೀಲಿಸುವಂತೆ ಗ್ರಾಹಕರಿಗೆ ಇಂಡಿಗೋ ಸಲಹೆ ನೀಡಿದೆ.
ಅಲ್ಲದೇ ಏರ್ ಇಂಡಿಯಾ ಸಂಸ್ಥೆ ಕೂಡ ಜಮ್ಮು, ಶ್ರೀನಗರ, ಲೇಹ್, ಜೋಧ್ಪುರ, ಅಮೃತಸರ, ಭುಜ್, ಜಾಮ್ನಗರ, ಚಂಡೀಗಢ ಮತ್ತು ರಾಜ್ಕೋಟ್ ನಿಲ್ದಾಣಗಳಿಗೆ ತೆರಳುವ ಮತ್ತು ಅಲ್ಲಿಂದ ಹೊರಡುವ ಎಲ್ಲಾ ವಿಮಾನಗಳ ಹಾರಾಟಗಳನ್ನು ಮೇ 10ರ ವರೆಗೆ ಬಂದ್ ಮಾಡಿದೆ ಎಂದು ಎಕ್ಸ್ ಮೂಲಕ ತಿಳಿಸಿದೆ.
'ಆಪರೇಷನ್ ಸಿಂಧೂರ' ಅಡಿಯಲ್ಲಿ ಭಾರತವು ಪಾಕಿಸ್ತಾನದ 9 ಉಗ್ರರ ಅಡಗುತಾಣಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯ ನಂತರ ಭಾರತದ ಗಡಿಭಾಗಗಳಲ್ಲಿ ವಿಮಾನ ಹಾರಾಟವನ್ನು ನಿಷೇಧಿಸಲಾಗಿದೆ.