ಬೆಂಗಳೂರು,ಮೇ. 08 (DaijiworldNews/AK): ಡಾ.ಆರ್.ರಂಗಮಂಜು ಅವರು ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆ 2025 ರಲ್ಲಿ (UPSC) 24ನೇ ರ್ಯಾಂಕ್ ಪಡೆಯುವ ಮೂಲಕ ಕರ್ನಾಟಕ ರಾಜ್ಯದ ಟಾಪರ್ ಆಗಿದ್ದಾರೆ. ವೈದ್ಯರಾಗಿರುವ ರಂಗಮಂಜು ತಮ್ಮ ಆರನೇ ಪ್ರಯತ್ನದಲ್ಲಿ ಭಾರತದ ಅತ್ಯಂತ ಸ್ಪರ್ಧಾತ್ಮಕ ಪರೀಕ್ಷೆಯನ್ನು ತೇರ್ಗಡೆಗೊಳಿಸುವಲ್ಲಿ ಯಶಸ್ವಿಯಾದರು. ಇವರ ಸ್ಪೂರ್ತಿದಾಯಕ ಕಥೆ ಇಲ್ಲಿದೆ.

ಮೂಲತಃ ರಂಗಮಂಜು ರಾಮನಗರದವರು. ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ರಾಜಾಜಿನಗರದ ನ್ಯಾಷನಲ್ ಪಬ್ಲಿಕ್ ಶಾಲೆಯ ಹಳೆಯ ವಿದ್ಯಾರ್ಥಿ ರಂಗಮಂಜು. ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಿಂದ ಎಂಬಿಬಿಎಸ್ ಪದವಿ ಪಡೆದಿದ್ದಾರೆ.
ಸೇವೆಯಲ್ಲಿರುವಾಗಲೇ ನಿಧನರಾದ ಮಾಜಿ ಐಪಿಎಸ್ ಅಧಿಕಾರಿಯಾಗಿದ್ದ ತಂದೆ ಆರ್ ರಮೇಶ್, ರಂಗಮಂಜು ಅವರಿಗೆ ಸ್ಫೂರ್ತಿ. ತಂದೆಯಂತೆ ತಾನು ಅಧಿಕಾರಿಯಾಗಬೇಕು ಎಂಬ ಸಂಕಲ್ಪದದಲ್ಲಿ ಯುಪಿಎಸ್ಸಿನಲ್ಲಿ ಆರನೇ ಪ್ರಯತ್ನದಲ್ಲಿ ರಂಗಮಂಜು ಯಶಸ್ಸುಗಳಿಸಿದ್ದಾರೆ.
ರಂಗಮಂಜು ಪ್ರಿಲಿಮ್ಸ್ ಮತ್ತು ಮೈನ್ಸ್ಗಳಿಗೆ ಯಾವುದೇ ತರಬೇತಿಯನ್ನು ಪಡೆದಿಲ್ಲ. ಅವರು ಮಾನವಶಾಸ್ತ್ರವನ್ನು ತಮ್ಮ ಐಚ್ಛಿಕ ವಿಷಯವಾಗಿ ಆರಿಸಿಕೊಂಡರು ಮತ್ತು ಪ್ರಾಥಮಿಕವಾಗಿ ಸ್ನೇಹಿತರೊಂದಿಗೆ ಗುಂಪು ಅಧ್ಯಯನ ಮೂಲಕ ಸ್ವಯಂ-ಅಧ್ಯಯನ ಮತ್ತು ಸಹಯೋಗದ ಕಲಿಕೆಯನ್ನು ಅವಲಂಬಿಸಿದ್ದರು.
ರಚನಾತ್ಮಕ ತರಬೇತಿಯನ್ನು ಪಡೆಯದಿದ್ದರೂ, ಪರೀಕ್ಷಾ ಪರಿಸ್ಥಿತಿಗಳನ್ನು ಅನುಕರಿಸಲು ಮತ್ತು ಅವರ ಉತ್ತರಗಳನ್ನು ಪರಿಷ್ಕರಿಸಲು ಅವರು ಪರೀಕ್ಷಾ ಸರಣಿಯಲ್ಲಿ ಭಾಗವಹಿಸಿದರು. ಇದರಿಂದ ರಂಗಮಂಜು ಕಠಿಣ ಪರಿಶ್ರಮ ಮತ್ತು ತಾಳ್ಮೆಗೆ ಅವರು ತಮ್ಮ ಯಶಸ್ಸನ್ನು ಪಡೆಯವುದಕ್ಕೆ ಸಾಧ್ಯವಾಯಿತು.