ಶ್ರೀನಗರ, ಮೇ. 09 (DaijiworldNews/AA): ಪಾಕಿಸ್ತಾನ ಮತ್ತೆ ಮತ್ತೆ ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸುತ್ತಲೇ ಇದೆ. ಇದೀಗ ಇಂದು ಮತ್ತೆ ಉರಿ ಸೆಕ್ಟರ್ನ ಎಲ್ಒಸಿ ಉದ್ದಕ್ಕೂ ಪಾಕಿಸ್ತಾನ ಮತ್ತೆ ಶಸ್ತ್ರಾಸ್ತ್ರ ಮತ್ತು ಫಿರಂಗಿ ಗುಂಡಿನ ದಾಳಿ ನಡೆಸಿದೆ. ಉರಿಯಲ್ಲಿ ಗುಂಡಿನ ದಾಳಿ ಮತ್ತು ಸ್ಫೋಟಗಳ ಸದ್ದು ಕೇಳಿಬಂದಿದ್ದು, ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿ, ಉರಿ ಸೆಕ್ಟರ್ನಲ್ಲಿ ಶೆಲ್ ದಾಳಿ ಆರಂಭಿಸಿದೆ.

ಜಮ್ಮು-ಕಾಶ್ಮೀರದ ಹಂದ್ವಾರ ಜಿಲ್ಲೆಯ ನೌಗಮ್ ಸೆಕ್ಟರ್, ಉರಿ, ಪೂಂಚ್ ಬಳಿಕ ಕುಪ್ವಾರಾ ಜಿಲ್ಲೆಯ ಕರ್ನಾ ಮತ್ತು ತಂಗ್ಧರ್ ವಲಯಗಳಲ್ಲಿ ಪಾಕಿಸ್ತಾನ ದಾಳಿ ನಡೆಸುತ್ತಿದೆ. ಇದರ ಬೆನ್ನಲ್ಲೇ ಭಾರತದ ವಾಯು ಪಡೆ ಪಾಕಿಸ್ತಾನದ ಡ್ರೋನ್ ಹಾಗೂ ಕ್ಷಿಪಣಿಗಳನ್ನು ಹೊಡೆದುರುಳಿಸಿದೆ.
ದಾಳಿ ಆರಂಭವಾಗುತ್ತಿದ್ದಂತೆ ಜಮ್ಮು ವಿಮಾನ ನಿಲ್ದಾಣ ಹಾಗೂ ಪಠಾಣ್ಕೋಟ್ ವಾಯುನೆಲೆಯ ಸೈರನ್ಗಳು ಮೊಳಗಿದವು. ನಿಯಂತ್ರಣ ರೇಖೆಯ ಉರಿ ವಲಯದಲ್ಲಿ ಪಾಕಿಸ್ತಾನ ನಡೆಸಿದ ದಾಳಿಗೆ ಓರ್ವ ಮಹಿಳೆ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವುದಾಗಿ ತಿಳಿದುಬಂದಿದೆ.
ಗುರುವಾರ ಪಾಕಿಸ್ತಾನ ಭಾರತದ 36 ಕಡೆಗಳಲ್ಲಿ ಸುಮಾರು 400 ಡ್ರೋನ್ಗಳ ಮೂಲಕ ದಾಳಿ ನಡೆಸಲು ಯತ್ನಿಸಿತ್ತು. ಆ ದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸಿತ್ತು. ಅದಾದ ನಂತರ ಭಾರತ ಕೂಡ ಪಾಕಿಸ್ತಾನದೊಳಗೆ ಅನೇಕ ಪ್ರದೇಶಗಳ ಮೇಲೆ ದಾಳಿ ನಡೆಸಿತ್ತು.