ನವದೆಹಲಿ, ಮೇ. 10 (DaijiworldNews/AA): ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಮಧ್ಯೆ ಮೇ 15 ರ ಗುರುವಾರ ಬೆಳಿಗ್ಗೆ 5:29 ರವರೆಗೆ ದೇಶಾದ್ಯಂತ 32 ವಿಮಾನ ನಿಲ್ದಾಣಗಳಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿರುವುದಾಗಿ ಭಾರತ ಸರ್ಕಾರ ಆದೇಶ ಹೊರಡಿಸಿದೆ.

ಈ ಹಿಂದೆ ಮೇ 10ರ ವರೆಗೆ ವಿಮಾನ ನಿಲ್ದಾಣಗಳಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸುವ ತೀರ್ಮಾನ ಘೋಷಿಸಲಾಗಿತ್ತು. ಆದರೆ, ಇದೀಗ ಪರಿಸ್ಥಿತಿ ಬಿಗಡಾಯಿಸಿರುವ ಕಾರಣ ಮೇ 15 ರ ವರೆಗೆ ವಿಸ್ತರಣೆ ಮಾಡಲಾಗಿದೆ. ಪಾಕಿಸ್ತಾನ ನಡೆಸುತ್ತಿರುವ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಚಂಡೀಗಢ, ಶ್ರೀನಗರ, ಅಮೃತಸರ, ಲೂಧಿಯಾನ, ಭುಂತರ್, ಕಿಶನ್ಗಢ, ಪಟಿಯಾಲ, ಶಿಮ್ಲಾ, ಜೈಸಾಲ್ಮೇರ್, ಪಠಾಣ್ಕೋಟ್, ಜಮ್ಮು, ಬಿಕಾನೇರ್, ಲೇಹ್, ಪೋರ್ಬಂದರ್ ಸೇರಿದಂತೆ 32 ವಿಮಾನ ನಿಲ್ದಾಣಗಳಲ್ಲಿ ಮೇ 15 ರವರೆಗೆ ವಿಮಾನ ನಿಲ್ದಾಣಗಳಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿಸಲಾಗಿದೆ. ಈ ಎಲ್ಲಾ ವಿಮಾನ ನಿಲ್ದಾಣಗಳು ಭಾರತ-ಪಾಕ್ ಗಡಿಯ ಸಮೀಪವಿರುವ ನಗರಗಳಲ್ಲಿವೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಭದ್ರತಾ ಕಾರಣಗಳಿಗಾಗಿ ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಕೇಂದ್ರ ಮಾಹಿತಿ ನೀಡಿದೆ.
ಭಾರತ ಮತ್ತು ಪಾಕಿಸ್ತಾನ ನಡುವಣ ಸಂಘರ್ಷದ ಹಿನ್ನೆಲೆಯಲ್ಲಿ, ಹಲವಾರು ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಪ್ರಯಾಣ ಮಾರ್ಗಸೂಚಿ, ಸಲಹೆಗಳನ್ನು ಬಿಡುಗಡೆಗೊಳಿಸಿದೆ. ವಿಮಾನ ನಿಲ್ದಾಣಕ್ಕೆ ತೆರಳುವ ಮುನ್ನ ಅಪ್ಡೇಟ್ಗಳನ್ನು ತಿಳಿದುಕೊಳ್ಳುವಂತೆ ಹೇಳಿದೆ.