ನವದೆಹಲಿ, ಮೇ. 14 (DaijiworldNews/AA): 'ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅಥವಾ ಸಶಸ್ತ್ರ ಪಡೆಗಳನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ' ಎಂದು ದೆಹಲಿ ಸಿಎಂ ರೇಖಾ ಗುಪ್ತಾ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ತುರ್ತು ಪರಿಸ್ಥಿತಿ ಎದುರಾದಾಗ ದೇಶದ ಹಿತಾಸಕ್ತಿಗಳಿಗೆ ಅನುಗುಣವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಇಡೀ ದೇಶವು ಸಶಸ್ತ್ರ ಪಡೆಗಳ ಜೊತೆ ನಿಂತಿರುತ್ತದೆ' ಎಂದಿದ್ದಾರೆ.
'ಕದನ ವಿರಾಮ ಫೋಷಣೆಗೆ ಕಾರಣವೇನು?, ಪಹಲ್ಕಾಮ್ ಉಗ್ರರ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನಿಜವಾಗಿಯೂ ನ್ಯಾಯ ದೊರಕಿದೆಯೇ' ಎಂದು ಎಎಪಿ ನಾಯಕರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟೀಕಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರೇಖಾ ಗುಪ್ತಾ, 'ಹವಾನಿಯಂತ್ರಿತ (ಎಸಿ) ಕೋಣೆಗಳಲ್ಲಿ ಕುಳಿತು ಟಿವಿ ನೋಡುವ ಮೂಲಕ ಯಾರು ಏನು ಬೇಕಾದರೂ ಹೇಳಬಹುದು. ಕಠಿಣ ಸಂದರ್ಭವನ್ನು ಎದುರಿಸುತ್ತಿರುವವರು ಮಾತ್ರ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಒಬ್ಬ ತಂದೆ ತನ್ನ ದೇಶ, ತನ್ನ ಕುಟುಂಬ, 140 ಕೋಟಿ ಭಾರತೀಯರ ಬಗ್ಗೆ ಯೋಚಿಸಬೇಕು. ಕೇವಲ ಹೇಳಿಕೆಗಳನ್ನು ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಸರ್ಕಾರ ಅಥವಾ ಸಶಸ್ತ್ರ ಪಡೆಗಳನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.