ಬೆಂಗಳೂರು, ಮೇ. 16(DaijiworldNews/AK): ಪಾಕಿಸ್ತಾನಕ್ಕೆ ಬೆಂಬಲಿಸಿದ ಚೀನಾಗೆ ಬಾಯ್ಕಾಟ್ ಹೇಳುವ ಧೈರ್ಯ ಇದೆಯಾ? ಎಂದು ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದ ಜೊತೆ ಓಪನ್ ಆಗಿ ಟರ್ಕಿ, ಚೀನಾ ಬಂತು. ನಮ್ಮ ಜೊತೆ ಯಾವುದಾದರೂ ದೇಶ ಬಂದಿದ್ಯಾ? ಮೋದಿ ನೂರು ದೇಶಗಳನ್ನು ಪ್ರವಾಸ ಮಾಡಿದ್ದರು. ಎಲ್ಲಾ ಪ್ರಧಾನಿಗಳನ್ನ ಅಪ್ಪಿಕೊಂಡರು. ಒಬ್ಬರಾದರೂ ಸಹಾಯಕ್ಕೆ ಬಂದರಾ ಎಂದು ಪ್ರಶ್ನಿಸಿದ್ದಾರೆ.
ಬಾಯ್ಕಾಟ್ ಟರ್ಕಿ, ಅಜರ್ಬೈಜಾನ್ ಎಂದು ಹೇಳುತ್ತಿದ್ದಾರೆ. ಬಾಯ್ಕಾಟ್ ಅಮೆರಿಕಾ, ಬಾಯ್ಕಾಟ್ ಟ್ರಂಪ್ ಮಾಡುತ್ತಾರಾ? ಬಾಯ್ಕಾಟ್ ಚೀನಾ ಎಂದು ಹೇಳುವ ಧೈರ್ಯ ಇದೆಯಾ? ಜೈಶಂಕರ್ ಚೀನಾ ಜೊತೆ ಯುದ್ಧ ಮಾಡೋಕೆ ಆಗುವುದಿಲ್ಲ ಎಂದರು. ಇದು ಅವರ ಸಾಮರ್ಥ್ಯ ಎಂದು ವ್ಯಂಗ್ಯವಾಡಿದ್ದಾರೆ.
ಕದನ ವಿರಾಮ ವಿಚಾರವಾಗಿ ಮಾತನಾಡಿದ ಅವರು, ಎಲ್ಲಾ ವಿಪಕ್ಷಗಳು ಸರ್ಕಾರದ ಬೆಂಬಲಕ್ಕೆ ನಿಂತಿವೆ. ಏನೇ ನಿರ್ಧಾರ ಮಾಡಿದರೂ ನಿಮ್ಮ ಜೊತೆ ಇದ್ದೀವಿ. ದೇಶದ ಹಿತಕ್ಕೋಸ್ಕರ ಏನೇ ನಿರ್ಧಾರ ಮಾಡಿದರೂ ಬೆಂಬಲ ಕೊಡುವುದಾಗಿ ಹೇಳಿದ್ದೇವೆ. ಆದರೆ ನಮ್ಮ ವಿದೇಶಾಂಗ ನೀತಿ ಬಗ್ಗೆ ನಮ್ಮ ಆಕ್ಷೇಪವಿದೆ ಎಂದರು.
ಕದನ ವಿರಾಮ ಇರಬಹುದು, ಬೇರೆ ನೀತಿಗಳು, ನಿರ್ಣಯಗಳನ್ನ ಟ್ರಂಪ್ ಯಾಕೆ ಘೋಷಣೆ ಮಾಡುತ್ತಿದ್ದಾರೆ. ನನ್ನಿಂದ ಕದನ ವಿರಾಮ ಆಗಿದೆ ಎಂದು ಹೇಳುತ್ತಿದ್ದಾರೆ. ಭಾರತ-ಪಾಕಿಸ್ತಾನಕ್ಕೆ ವ್ಯಾಪಾರ ಮಾಡಿ, ನಾನು ವ್ಯಾಪಾರ ಕೊಡುತ್ತೇನೆ ಎಂದು ಟ್ರಂಪ್ ಹೇಳುತ್ತಿದ್ದಾರೆ. ಇದು ಬೆದರಿಕೆನಾ? ಆಮಿಷನಾ? ತಿಳಿಯಬೇಕು ಎಂದು ಆಗ್ರಹಿಸಿದರು.
.