ಕಠ್ಮಂಡು, ಮೇ. 16 (DaijiworldNews/AA): ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ್ ಏರಿದ ಭಾರತೀಯ ಪರ್ವತಾರೋಹಿಯೊಬ್ಬರು ಇಳಿಯುವಾಗ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಪಶ್ಚಿಮ ಬಂಗಾಳದ ಸುಬ್ರತಾ ಘೋಷ್(45) ಮೃತ ಪರ್ವತಾರೋಹಿ.
ಸುಬ್ರತಾ ಘೋಷ್ ಅವರು 29,032 ಅಡಿ ಎತ್ತರದ ಮೌಂಟ್ ಎವರೆಸ್ಟ್ ಶಿಖರವನ್ನು ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ತಲುಪಿದರು. ಬಳಿಕ ಪರ್ವತ ಇಳಿಯುವಾಗ ಅವರಿಗೆ ಇದ್ದಕ್ಕಿದ್ದಂತೆ ಆಯಾಸ ಮತ್ತು ಹೈಟ್ ಫೋಬಿಯಾ ಕಾಣಿಸಿಕೊಂಡಿದೆ. ಅವರು ಹಿಲರಿ ಸ್ಟೆಪ್ಸ್ ಬಳಿ ಮೃತಪಟ್ಟಿದ್ದಾರೆ ಎಂದು ಪರ್ವತಾರೋಹಣ ಆಯೋಜಕರು ಶುಕ್ರವಾರ ಮಾಹಿತಿ ನೀಡಿದ್ದಾರೆ.
ಹೆಚ್ಚು ಆಯಾಸವಾದ ಬಳಿಕ ಘೋಷ್ ಕೆಳಗೆ ಇಳಿಯಲು ನಿರಾಕರಿಸಿದರು. ಅವರ ಮಾರ್ಗದರ್ಶಿ ಅವರನ್ನು ಕೆಳಗೆ ಕರೆತರಲು ಪ್ರಯತ್ನಿಸಿದರು. ಆದರೆ ಘೋಷ್ರಿಂದ ಇಳಿಯಲು ಸಾಧ್ಯವಾಗಲಿಲ್ಲ. ಆ ಬಳಿಕ ಮಾರ್ಗದರ್ಶಿ ಗುರುವಾರ ರಾತ್ರಿ ಒಂಟಿಯಾಗಿ ಕ್ಯಾಂಪ್ಗೆ ಹಿಂತಿರುಗಿ ಮಾಹಿತಿ ನೀಡಿದರು ಎಂದರು.