ಬೆಂಗಳೂರು, ಮೇ. 16 (DaijiworldNews/AA): ಕಾಂಗ್ರೆಸ್ ಪಕ್ಷವು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ. ಈ ನೀತಿ ಅವರನ್ನೇ ನುಂಗಲಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಎಚ್ಚರಿಸಿದ್ದಾರೆ.

ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿನವರು ತಮ್ಮ ವಕ್ರಬುದ್ಧಿಯನ್ನು ಪ್ರದರ್ಶನ ಮಾಡಿದ್ದಾರೆ. ಮುಖ್ಯಮಂತ್ರಿಗಳು, ಪ್ರಿಯಾಂಕ ಖರ್ಗೆ, ದಿನೇಶ್ ಗುಂಡುರಾವ್, ಸಂತೋಷ್ ಲಾಡ್ ರವರು ಇನ್ನೂ ಅನೇಕರು ನಮಗೆ ಯುದ್ಧ ಬೇಕಾಗಿಲ್ಲ, ನಾವು ಯುದ್ಧದ ಪರ ಇಲ್ಲ ಎಂದು ಹೇಳಿಕೆಯನ್ನು ನೀಡಿದ್ದರು. ಆದರೆ ಎಐಸಿಸಿ ಕೊನೆಯಲ್ಲಿ ಒಂದು ತೀರ್ಮಾನಕ್ಕೆ ಬಂದಿತು. ನಾವು ಕೇಂದ್ರ ಸರ್ಕಾರದ ಜೊತೆ ನಿಲ್ಲದಿದ್ದರೆ ನಮಗೆ ಈ ದೇಶದಲ್ಲಿ ಉಳಿಗಾಲವಿಲ್ಲ ಜನ ನಮ್ಮ ವಿರುದ್ಧ ತಿರುಗಿ ಬೀಳುತ್ತಾರೆ ಎಂದು ಗಮನಿಸಿತು. ಬಳಿಕ ಮೋದಿ ಜೀ ತೀರ್ಮಾನಕ್ಕೆ ನಮ್ಮ ಬೆಂಬಲವಿದೆ ಎಂದು ಹೇಳಿದಾಗ ಇಲ್ಲಿನ ನಾಯಕರು ಬಾಯಿ ಮುಚ್ಚಿಕೊಂಡರು ಎಂದು ಟೀಕಿಸಿದರು.
ಭಾರತ ಸರ್ಕಾರ ಭಯೋತ್ಪಾದಕರು ಅಡಗಿ ಕುಳಿತಿರುವ 9 ಸ್ಥಳಗಳನ್ನು ಗುರುತಿಸಿ 100 ಭಯೋತ್ಪಾದಕರನ್ನು ಕೊಂದಿರುವ ವಿಷಯ ಹಳೆಯದಲ್ಲ. ನಾವು ಪಾಕಿಸ್ತಾನದ ವಿರುದ್ಧವಾಗಿ ಯುದ್ಧ ಸಾರಲಿಲ್ಲ ಹಾಗೂ ಮಾಡಲಿಲ್ಲ. ಏಪ್ರಿಲ್ 22ರಂದು ನಮ್ಮ ನೆಲಕ್ಕೆ ಭಯೋತ್ಪಾದಕರು ಬಂದು 26 ಜನರನ್ನು ಧರ್ಮ ಕೇಳಿ ಅವರ ತಲೆಗೆ ಹೊಡೆದು ಹತ್ಯೆ ಮಾಡಿರುವುದು ದೇಶಕ್ಕೆ ತಿಳಿದಿರುವ ವಿಚಾರ. ಆ ಕಾರಣಕ್ಕಾಗಿ ನಾವು ಭಯೋತ್ಪಾದಕಕರನ್ನು ಗುರಿ ಮಾಡಿದ್ದು. ನಮ್ಮ ಸೈನಿಕರು ೧೦೦ ಮಂದಿ ಉಗ್ರರನ್ನು ಹತ್ಯೆ ಮಾಡಿದ್ದಾರೆ ಎಂದು ವಿವರಿಸಿದರು.
ಪಾಕಿಸ್ತಾನದ ಸರ್ಕಾರ ಭಯೋತ್ಪಾದಕರಿಗೆ ಬೆಂಬಲವಾಗಿ ನಿಂತು ನಮ್ಮ ದೇಶವನ್ನು ಗುರಿ ಮಾಡಿರುವುದು ಇಡೀ ಪ್ರಪಂಚಕ್ಕೆ ತಿಳಿದಿದೆ. ಆ ಕಾರಣದಿಂದ ಯುದ್ಧ ಕೂಡ ಪ್ರಾಂಭವಾಗಬಹುದು ಅನ್ನುವ ವಿಚಾರ ಬಂದಿದೆ. ಮೊದಲಿಗೆ ಎಐಸಿಸಿಯಾಗಲೀ ಅಥವಾ ಯಾರೇ ಆಗಲೀ ಈ ಕಾಂಗ್ರೆಸ್ ನಾಯಕರ ಮಾತುಗಳನ್ನು ಖಂಡಿಸಲಿಲ್ಲ. ಏಕೆಂದರೆ ಕಾಂಗ್ರೆಸ್ಸಿನಲ್ಲಿ ಇಬ್ಬಗೆಯ ನೀತಿ ಇದೆ ಎಂದು ಅವರು ಆರೋಪಿಸಿದರು. ಎಐಸಿಸಿ ನವರು ಬೆಂಬಲವನ್ನು ನೀಡಿದರೆ ಇಲ್ಲಿನ ನಾಯಕರು ಅವರ ಮನಸ್ಥಿತಿಯನ್ನು ಪ್ರದರ್ಶಿಸುತ್ತಿದ್ದಾರೆ ಎಂದರು.
ಪುಲ್ವಾಮ ದಾಳಿಯ ವಿಚಾರದಲ್ಲಿ ಭಾರತ ಸರ್ಜಿಕಲ್ ಸ್ಟ್ರೈಕ್ ಮಾಡಿದ ತರುವಾಯ ಕಾಂಗ್ರೆಸ್ಸಿನ ಒಬ್ಬ ವಕ್ತಾರ ಗಿಡಕ್ಕೆ ಗುಂಡು ಹೊಡೆದು ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾರೆ ಎಂದು ಹೇಳಿದ್ದರು. ನಂತರ ಸಾಕ್ಷಿ ಕೇಳಿದ್ದರು. ಪ್ರಸ್ತುತ ಪಾಕಿಸ್ತಾನದ ಮಂತ್ರಿಗಳು ಪುಲ್ವಾಮ ದಾಳಿಗೆ ನಾವೇ ಕಾರಣ ಎಂದು ಹೇಳಿಕೆ ನೀಡಿದ್ದಾರೆ. ಅವತ್ತು ಸಾಕ್ಷಿ ಕೇಳಿದ ನಾಯಕರು ಈಗ ನಿಮ್ಮ ಮುಖ ಮತ್ತು ತಲೆಯನ್ನು ಎಲ್ಲಿ ಇಟ್ಟುಕೊಳ್ಳುತ್ತೀರಿ? ಎಂದು ಪ್ರಶ್ನಿಸಿದರು.
ಇಂದು ವಿಮಾನಗಳನ್ನು ಹಾರಿಸಿ ನಾವು ಯುದ್ಧವನ್ನು ಗೆದ್ದಿದ್ದೇವೆ ಎಂದು ಬೀಗುತ್ತಿದ್ದಾರೆ. ಅವರು ಯಾವ ಯುದ್ಧವನ್ನೂ ಮಾಡಿಲ್ಲ ಎಂದು ಕಾಂಗ್ರೆಸ್ಸಿನ ಶಾಸಕ ಕೊತ್ತೂರು ಮಂಜುನಾಥ್ ಅವರು ಹೇಳುತ್ತಾರೆ. ಕಾಂಗ್ರೆಸ್ಸಿನªರಿಗೆ ಅವರ ನಾಲಿಗೆ ಮೇಲೆ ಹಿಡಿತವಿದೆಯೇ? ಎಂದು ಕೇಳಿದರು. ಕಾಂಗ್ರೆಸ್ ನಾಯಕರೇ, ಯಾಕೆ ಇಲ್ಲದ್ದನ್ನು ಮಾತನಾಡಿ ಜನರ ಕೋಪಕ್ಕೆ ಗುರಿಯಾಗುತ್ತೀರಿ. ಒಳ್ಳೆ ರಾಜಕಾರಣ ಮಾಡಲು ನಿಮಗೆ ಏನು ರೋಗ ಎಂದು ನಾನು ನಿಮಗೆ ಕೇಳಲಿಕ್ಕೆ ಬಯಸುತ್ತೇನೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷವು ಅವರ ನಾಯಕರು ಏನೇ ಮಾತನಾಡಿದರೂ ಖಂಡಿಸುವುದಿಲ್ಲ. ಅಂದರೆ ಕಾಂಗ್ರೆಸ್ ಇನ್ನೂ ವಕ್ರಬುದ್ಧಿಯನ್ನು ಬಿಟ್ಟಿಲ್ಲ. ಪಾಕಿಸ್ತಾನ ಯಾವ ಪ್ರಶ್ನೆಗಳನ್ನು ಕೇಳಬೇಕಿತ್ತೋ ಆ ಪಾಕಿಸ್ತಾನದ ಪ್ರಶ್ನೆಗಳನ್ನು ಪ್ರಿಯಾಂಕ ಖರ್ಗೆ, ಸಂತೋಷ್ ಲಾಡ್, ಕೊತ್ತೂರು ಮಂಜುನಾಥ್ ಅವರು ಕೇಳುತ್ತಿದ್ದಾರೆ ಎಂದರೆ ಪಾಕಿಸ್ತಾನದ ಕೆಲವು ನಾಯಕರು ಜೊತೆ ಇವರು ಸಂಪರ್ಕದಲ್ಲಿ ಇರಬಹುದು ಎಂಬ ಸಂಶಯ ಉದ್ಭವಿಸುತ್ತಿದೆ. ಇಲ್ಲಿರುವ ಮುಸ್ಲಿಂ ಬಾಂಧವರು ಭಾರತೀಯ ಪ್ರಜೆಗಳು, ಅವರು ಭಾರತದ ಪರ ಇದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷ ಜನರಿಗೆ ತಪ್ಪು ಮಾಹಿತಿ ತಲುಪಿಸುತ್ತಿದೆ. ಕಾಂಗ್ರೆಸ್ಸಿನವರು ನಮ್ಮ ರಾಷ್ಟ್ರೀಯ ನೀತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದು, ಆ ನೀತಿಗೆ ನನ್ನ ಧಿಕ್ಕಾರವಿರಲಿ ಹಾಗೂ ಕಾಂಗ್ರೆಸ್ಸಿನ ನಾಯಕತ್ವಕ್ಕೆ ಜನ ಬುದ್ಧಿ ಕಲಿಸುತ್ತಾರೆ. ಮೋದಿಯವರ ನಡೆಯ ಬಗ್ಗೆ ಪ್ರತಿಯೊಬ್ಬ ಭಾರತೀಯರಿಗೆ ವಿಶ್ವಾಸವಿದೆ ಹಾಗೂ ಮೋದಿ ಜೀ ರವರ ರಕ್ಷಣೆಗೆ ದೇಶದ ಜನರು ಒಗ್ಗೂಡುತ್ತಾರೆ. ಬಿಜೆಪಿ ನಡೆಯನ್ನು ಇಡೀ ರಾಜ್ಯ ವಿಜಯೋತ್ಸವದೊಂದಿಗೆ ಆಚರಿಸುತ್ತಿದೆ ಎಂದು ಹೇಳಿದರು.