ಹುಬ್ಬಳ್ಳಿ, ಮೇ. 16 (DaijiworldNews/AA): 'ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ದೇಶದ ರಕ್ಷಣಾ ಕ್ಷೇತ್ರವನ್ನು ಬಲಪಡಿಸಿಲ್ಲ' ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ರಕ್ಷಣಾ ಸಾಮಾಗ್ರಿಗಳನ್ನು ತಯಾರು ಮಾಡುವ ಸಂಸ್ಥೆಗಳಿಗೂ ಸಹ ಹಣಕಾಸಿನ ನೆರವು ನೀಡಿರಲಿಲ್ಲ. ದೇಶ ಸಂಕಷ್ಟ ಮತ್ತು ಸಾಧನೆ ಮಾಡಿದ ಎರಡೂ ಸಮಯದಲ್ಲಿ ಕಾಂಗ್ರೆಸ್ ದೇಶದ ವಿರುದ್ಧ ಮಾತನಾಡುತ್ತದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.
'ಇಂದು ಭಾರತೀಯ ಸೇನೆ ಸ್ವಾವಲಂಬಿಯಾಗಿ, ಆತ್ಮನಿರ್ಭರವಾಗಿದೆ. ಇದನ್ನು ಕಾಂಗ್ರೆಸ್ಗೆ ಸಹಿಸಲು ಆಗುತ್ತಿಲ್ಲ. ಹೀಗಾಗಿ ಅನಾವಶ್ಯಕ ಆರೋಪಗಳನ್ನು ಮಾಡುತ್ತಿದೆ. ಈ ಹಿಂದೆ ಸಿಎಂ ಯುದ್ಧ ಯಾಕೆ ಬೇಕು ಎಂದಿದ್ರು. ಜಮೀರ್ ನಾನೇ ಬಾಂಬ್ ಕಟ್ಟಿಕೊಂಡು ಹೋಗ್ತೇನೆ ಎಂದಿದ್ರು. ಒಬ್ಬೊಬ್ಬ ಸಚಿವ, ಶಾಸಕ ಒಂದು ಮಾತನಾಡುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಯಾಕೆ ಹೀಗೆ ಹೇಳಿಕೆ ನೀಡುತ್ತಿದೆ. ಹೀಗೆ ಮಾತನಾಡಿ ಎಂದು ಕಾಂಗ್ರೆಸ್ ಹೈಕಮಾಂಡ್ ಏನಾದರೂ ಹೇಳಿಕೊಟ್ಟಿದೆಯೇ' ಎಂದು ಪ್ರಶ್ನಿಸಿದರು.
'ಕಾಂಗ್ರೆಸ್ ಯಾವತ್ತೂ ದೇಶದ ಪರವಾಗಿಲ್ಲ. ಜನ ಎಲ್ಲವನ್ನೂ ನೋಡುತ್ತಿದ್ದಾರೆ. ನಮಗೆ ನಮ್ಮ ಸೈನಿಕರ ಬಗ್ಗೆ ಹೆಮ್ಮೆಯಿದೆ, ತಂತ್ರಜ್ಞಾನದ ಬಗ್ಗೆ ಹೆಮ್ಮೆಯಿದೆ. ಭಾರತ ಇಂದು ಯುದ್ಧ ಸಾಮಾಗ್ರಿಗಳನ್ನು ಬೇರೆ ದೇಶಕ್ಕೆ ರಫ್ತು ಮಾಡುತ್ತಿದೆ' ಎಂದು ಹೇಳಿದರು.
ಚೀನಾ ವಸ್ತುಗಳ ನಿಷೇಧ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, 'ಚೀನಾದಿಂದ ಹೆಚ್ಚಾಗಿ ಫೋನ್, ಗೊಂಬೆಗಳು ಬರುತ್ತಿವೆ. ಹಂತ ಹಂತವಾಗಿ ಕಡಿವಾಣ ಹಾಕಲಾಗುತ್ತಿದೆ. ಎಲ್ಲವನ್ನೂ ಒಂದೇ ಸಲ ನಿಲ್ಲಿಸಲು ಆಗಿಲ್ಲ. ಈ ಹಿಂದೆ ಸಾಕಷ್ಟು ಒಪ್ಪಂದಗಳು ಆಗಿದೆ. ಸ್ನೇಹಯುತವಾಗಿ ನಾವು ಹೋಗಬೇಕಿದೆ. ವಿಶ್ವಸಂಸ್ಥೆ ನಿಯಮಗಳನ್ನು ಪಾಲನೆ ಮಾಡಬೇಕಿದೆ' ಎಂದರು.